ವಿಜಯಪುರ: ನಗರದ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ ಹಾಗೂ ಎಇಇ ಜೆ.ಎಸ್. ಸಾಲಿಮಠ ಅವರು ಶುಕ್ರವಾರ ಎಸಿಬಿ (Anti Corruption Bureau) ಬಲೆಗೆ ಬಿದ್ದಿದ್ದಾರೆ.
ಲಕ್ಷ್ಮಿ ಎಂಟರಪ್ರೈಸ್ನ ಗುತ್ತಿಗೆದಾರ ಅಶೋಕ ಪಾಟೀಲ ಅವರು ಕಚೇರಿಯಲ್ಲಿ ಕಾರ್ಮಿಕರನ್ನು ಗುತ್ತಿಗೆಗೆ ನೀಡುವ ಟೆಂಟರ್ ಪಡೆದುಕೊಂಡು, ಕೆಲಸ ಮಾಡಿಸಿದ್ದು, ಈ ಕುರಿತು ಫೆ. 2020ರಲ್ಲಿ ಕಾರ್ಮಿಕರನ್ನು ಪೂರೈಸಿದ ಬಿಲ್ ಮೊತ್ತ 50 ಲಕ್ಷ ರೂ.ಗಳ ಚೆಕ್ ನೀಡಲು ಮಂಡಳಿ ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ 50 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಲ್ಲದೆ ಇದೇ ರೀತಿ ಕಾರ್ಮಿಕರನ್ನು ಪೂರೈಸಿದ ಬಿಲ್ ಮಂಜೂರುಗೊಳಿಸಿದ ಎಇಇ ಜೆ.ಎಸ್. ಸಾಲಿಮಠ ಅವರು 20 ಸಾವಿರ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ ಹಿನ್ನೆಲೆ ಎಸಿಬಿಗೆ ದೂರು ನೀಡಲಾಗಿತ್ತು.
ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ 50 ಸಾವಿರ ರೂ. ಹಾಗೂ ಜೆ.ಎಸ್. ಸಾಲಿಮಠ 20 ಸಾವಿರ ರೂ.ಗಳ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದು, ಅಧಿಕಾರಿಗಳಿಂದ ಲೆಕ್ಕ ನೀಡಲಾರದ 1.43 ಲಕ್ಷ ರೂ.ಗಳು ಸೇರಿದಂತೆ ಒಟ್ಟು 1.74 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.