ಬೆಳಗಾವಿ: ಜಿಲ್ಲೆಯಲ್ಲಿರುವ ಎರಡು ಶೈಕ್ಷಣಿಕ ಜಿಲ್ಲೆಯಲ್ಲಿ ಶನಿವಾರ ನಡೆದ ಎಸ್.ಎಸ್.ಎಲ್.ಸಿ ಗಣಿತ ವಿಷಯದ ಪರೀಕ್ಷೆಗೆ ಜಿಲ್ಲಾದ್ಯಂತ ೨೫೯೮ ವಿದ್ಯಾರ್ಥಿಗಳು ಗೈರಾಗಿದ್ದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ೩೨೩೦೬ ವಿದ್ಯಾರ್ಥಿಗಳ ಪೈಕಿ ೩೧೫೦೧ ಪರೀಕ್ಷೆಗೆ ಹಾಜರಾಗಿದ್ದು, ೮೦೦ ವಿದ್ಯಾರ್ಥಿಗಳು ಗೈರಾಗಿದ್ದರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೪೦೯೦೯ ವಿದ್ಯಾರ್ಥಿಗಳ ಪೈಕಿ ೩೯೧೧೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೭೯೮ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು ೭೩೨೧೫ ವಿದ್ಯಾರ್ಥಿಗಳ ಪೈಕಿ ೭೦೬೧೨ ವಿದ್ಯಾರ್ಥಿಗಳು ಹಾಜರಾಗಿ, ಒಟ್ಟು ೨೫೯೮ ವಿದ್ಯಾರ್ಥಿಗಳು ಗೈರಾಗುವ ಮೂಲಕ ತಮ್ಮಲ್ಲಿರುವ ಕೊರೋನಾ ಭಯದ ಕುರಿತು ಸಂದೇಶ ರವಾನಿಸಿದ್ದಾರೆ.
ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ಬರೆಯಲು ಆಗಮಿಸಿದ್ದ ಪರೀಕ್ಷಾರ್ಥಿಗಳು ಸುರಕ್ಷತೆ ಕ್ರಮವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು ತೆರಳಿದರು. ಪರೀಕ್ಷೆ ಕೇಂದ್ರಗಳಲ್ಲಿ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನರನಿಂದ ತಾಪಮಾನ ಪರೀಕ್ಷಿಸಿ ಪರೀಕ್ಷಾರ್ಥಿಗಳನ್ನು ಒಳಗೆ ಬಿಡಲಾಯಿತು.
ಬೆಳಗಾವಿ ಜಿಲ್ಲೆಯಾದ್ಯಂತ ಪರೀಕ್ಷಾರ್ಥಿಗಳು ಎಲ್ಲ ನಿಯಮ ಅನುಸರಿಸಿ ಪರೀಕ್ಷೆ ಕೇಂದ್ರಗಳಿಗೆ ತೆರಳಿದರು. ಹಲವು ಕೇಂದ್ರಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮೇಲ್ವಿಚಾರಣೆ ನಡೆಸಿದರು. ಥರ್ಮಲ್ ಸ್ಕ್ಯಾನರನಿಂದ ಪರೀಕ್ಷಾರ್ಥಿಗಳ ತಾಪಮಾನ ಪರೀಕ್ಷಿಸಿ, ಸ್ಯಾನಿಟೈಸರ ನೀಡಿ, ಮಾಸ್ಕ್ ಧರಿಸಿದ್ದಾರೋ ಇಲ್ಲವೋ ಎನ್ನುವುದನ್ನು ನೋಡಿಯೇ ಪರೀಕ್ಷಾರ್ಥಿಗಳನ್ನು ಕೇಂದ್ರದ ಒಳಕ್ಕೆ ಬಿಡಲಾಯಿತು. ಅಲ್ಲದೇ ಕೊಠಡಿ ಹಾಗೂ ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹ್ಯಾಂಡ್ಗ್ಲೌಸ್ ಹಾಕಿಕೊಳ್ಳುವುದರ ಜತೆಗೆ ಸ್ಯಾನಿಟೈಸರ್ ಉಪಯೋಗಿಸಿದರು.