Sunday, August 14, 2022

Latest Posts

ಎಸ್ಸೆಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಅನುಷ್!

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ ಎ.ಎಲ್. 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದ ಪ್ರತಿಭಾವಂತ ವಿದ್ಯಾರ್ಥಿಯು ದ.ಕ. ಸೇರಿದಂತೆ ಕರಾವಳಿ ಜಿಲ್ಲೆಗೆ ಅತ್ಯಕ ಅಂಕ ಗಳಿಸಿ ಶ್ರೇಷ್ಠ ಸಾಧನೆ ಮಾಡಿದ್ದರೆ. ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ ಲೋಕೇಶ್ ಮತ್ತು ಉಷಾ ದಂಪತಿಯ ಪುತ್ರನಾಗಿದ್ದಾರೆ.
ಮನೆಯಲ್ಲಿ ಸಂಭ್ರಮಾಚರಣೆ
ಅನುಷ್ ಅವರು ರಾಜ್ಯಕ್ಕೆ ಟಾಪರ್ ಆಗಿ ಮೂಡಿ ಬಂದ ವಿಷಯ ತಿಳಿದು ಮನೆಯವರು ಅತೀವ ಸಂತಸಗೊಂಡರು. ಸಂತಸ ಮಿತಿ ಮೀರಿತ್ತು. ತಂದೆ ತಾಯಿ ಮತ್ತು ಸಹೋದರ ಆಕಾಶ್ ಮತ್ತು ಅಜ್ಜಿ ಸಹಿ ತಿನಿಸಿ ಸಂಭ್ರಮಾಚರಿಸಿದರು.
ಅಭಿನಂದಿಸಿದ ಗಣ್ಯರು
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್.ಅಂಗಾರ, ಗ್ರಾಮೀಣ ವಿದ್ಯಾರ್ಥಿ ಅನುಷ್ ಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.
ಯಾವುದೇ ಕೋಚಿಂಗ್ ಇಲ್ಲ
ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗಿಲ್ಲ. ಶಾಲೆಯಲ್ಲಿ ಶಿಕ್ಷಕರು ಏನು ಹೇಳಿಕೊಡುತ್ತಿದ್ದರೋ ಅದನ್ನು ಗಮನವಿಟ್ಟು ಕೇಳುತ್ತಿದ್ದೆ. ಅದನ್ನು ಮನೆಯಲ್ಲಿ ಬಂದು ಪುನರ್ ಮನನ ಮಾಡುತ್ತಿದ್ದೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಓದಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದರು.ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಕೂಡಾ ಶಿಕ್ಷಕರು ದೂರವಾಣಿ ಮೂಲಕ ನಮಗೆ ಬೋಧನೆ ಮಾಡಿ ಉತ್ತೇಜನ ನೀಡಿದ್ದಾರೆ. ಏಕಾಗ್ರತೆ, ಕಠಿಣ ಪರಿಶ್ರಮದಿಂದ ಮನೆಯಲ್ಲಿ ದಿನ ನಿತ್ಯದ ಪಾಠವನ್ನು ದಿನನಿತ್ಯ ಓದುತ್ತಿದ್ದೆ. ಬಾಯಿ ಪಾಠ ಮಾಡದೆ ಓದಿದನ್ನು ಮನಸಿನಲ್ಲಿ ಇರಿಸಿಕೊಳ್ಳುತ್ತಿದ್ದೆ ಇದು ಪರೀಕ್ಷಾ ಸಮಯದಲ್ಲಿ ಸುಲಭವಾಯಿತು. ಪರೀಕ್ಷಾ ಸಮಯದಲ್ಲಿ ನಾಲ್ಕು ಗಂಟೆಗೆ ಎದ್ದು ಓದುತ್ತಿದ್ದೆ. ಇತರ ದಿನಗಳಲ್ಲಿ 6 ಗಂಟೆಗೆ ಎದ್ದು ಓದುತ್ತಿದ್ದೆ.ರಾತ್ರಿ ತುಂಬಾ ನಿದ್ದೆ ಬಿಟ್ಟು ಓದುತ್ತಿರಲಿಲ್ಲ.ರಾತ್ರಿ 10.30 ಗಂಟೆಗೆ ಮಲಗುತ್ತಿದ್ದೆ.ಇದರಿಂದ ಆರೋಗ್ಯಪೂರ್ಣ ಅಧ್ಯಯನಕ್ಕೆ ಸಹಕಾರಿಯಾಯಿತು ಎಂದು ಅನುಷ್ ನುಡಿದರು.
ಲಾಕ್‌ಡೌನ್‌ನಲ್ಲಿ ಅಧ್ಯಯನ
ಲಾಕ್‌ಡೌನ್ ಕಾಲದಲ್ಲಿ ಪರೀಕ್ಷೆ ಮುಂದೆ ಹೋದುದರಿಂದ ಓದುವಿಕೆ ಕಡಿಮೆ ಆಗಿತ್ತು. ಶಿಕ್ಷಕರ ಸಂಪರ್ಕವೂ ಇರಲಿಲ್ಲ.ಆದರೆ ನಾನು ಲಾಕ್‌ಡೌನ್ ರಜಾ ಅವಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೆನು. ಪರೀಕ್ಷಾ ದಿನಾಂಕ ಘೋಷಣೆ ಆದ ನಂತರ ಹೆಚ್ಚುಒತ್ತು ಹಾಕಿ ಓದತೊಡಗಿದೆ. ಪರೀಕ್ಷೆ ಬರೆಯುವ ಸಮಯದಲ್ಲಿ ಕೊರೋನಾ ಮಹಾಮಾರಿಯ ಭಯವಿತ್ತು. ಆದರೆ ಸುಬ್ರಹ್ಮಣ್ಯದಲ್ಲಿ ಕೊರೋನಾ ಇರಲಿಲ್ಲ. ಹಾಗೂ ಪರೀಕ್ಷಾ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ಇದ್ದುದರಿಂದ ಹೆಚ್ಚು ಹುಮ್ಮಸ್ಸಿನಿಂದ ಪರೀಕ್ಷೆಯಲ್ಲಿ ಬರೆದನು.
ಮನೆಯಲ್ಲಿ ಉತ್ತಮ ಸಹಕಾರ
ಮನೆಯಲ್ಲಿ ತಂದೆ ತಾಯಿ ಉತ್ತಮ ಸಹಕಾರ ನೀಡುತ್ತಿದ್ದರು. ಓದಲು ಒತ್ತಡ ಹೇರುತ್ತಿರಲಿಲ್ಲ.ನನಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಮಾಡಿ ಕೊಡುತ್ತಿದ್ದರು. ಮನೆಯಲ್ಲಿ ಮನೋರಂಜನೆಗಾಗಿ ಟಿವಿಯನ್ನು ನೋಡುತ್ತಿದೆ. ಇದರೊಂದಿಗೆ ವಾಲಿಬಾಲ್ ಆಟಗಾರನಾಗಿದ್ದೇನೆ. ವಿಜ್ಞಾನ ಮಾದರಿ ರಚನೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದೇನೆ. ಮುಂದಿನ ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಪರಿಶ್ರಮದಿಂದ ಪಾಠ ಮತ್ತು ಶಾಲೆಯಲ್ಲಿ ಪಾಠಗಳನ್ನು ಆಸಕ್ತಿಯಿಂದ ಕೇಳಬೇಕು. ದಿನನಿತ್ಯದ ಪಾಠಗಳನ್ನು ದಿನಿತ್ಯ ಓದಬೇಕು. ಹಾಗಾದರೆ ಹೆಚ್ಚಿನ ಅಂಕ ಗಳಿಕೆಯ ಸಾಧನೆ ಮಾಡಬಹುದು ಎಂದು ಅನುಷ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss