ಬೆಳಗಾವಿ: ಸೋಮವಾರ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ಮಾಧ್ಯಮದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಜಂಟಿ ಪ್ರಥಮ ಸ್ಥಾನ ಹಂಚಿಕೊಂಡಿದ್ದರೆ, ಓರ್ವ ವಿದ್ಯಾರ್ಥಿನಿ ದ್ವೀತಿಯ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ಎಂ.ಕೆ.ಕವಟಗಿಮಠ ಕನ್ನಡ ಮಾಧ್ಯಮ ಹೈಸ್ಕೂಲಿನ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡರ 625 ಆಂಕಗಳ ಪೈಕಿ 623 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದುಕೊಂಡಿರುವ ಸಹನಾ, ವಿಜ್ಞಾನ, ಹಿಂದಿ, ಗಣಿತ ವಿಷಯಗಳಲ್ಲಿ 100ಕ್ಕೆ 100 ರಷ್ಟು ಹಾಗೂ ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಅದೇ ರೀತಿ ಗೋಕಾಕ ತಾಲೂಕಿನ ಮೂಡಲಗಿ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯ ಘಟಪ್ರಭಾದ ಕೆ.ಆರ್.ಹುಕ್ಕೇರಿ ಹೈಸ್ಕೂಲ್ ನ ಶೃತಿ ಬಸಗೌಡಾ ಪಾಟೀಲ 625 ಅಂಕಗಳ ಪೈಕಿ 623 ಅಂಕಗಳನ್ನು ಪಡೆದುಕೊಂಡು, ದಾವಣಗೆರೆಯ ಅಭಿಷೇಕ ಎಂ. ಜೊತೆಗೆ ಜಂಟಿ ಅಂಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿಯ ಪ್ರಗತಿ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಪಾ ಪಾರೀಶ ನಾಗನೂರಿ 622 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾಳೆ.