ಧಾರವಾಡ: ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡುತ್ತಿರುವ ಎಸ್ಡಿಎಂ ಆಸ್ಪತ್ರೆ ಉಳಿದ ಖಾಸಗಿ ಆಸ್ಪತ್ರೆಗಳಿಗೆ ಮಾದರಿ. ಕೋವಿಡ್ ಸೋಂಕಿತರ ತ್ವರಿತ ಪತ್ತೆಗೆ ಮತ್ತೊಂದು ಪ್ರಯೋಗಾಲಯ ನೆರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳ ಬದಲಿಗೆ ಜನರೇ ಸ್ವಯಂ ನಿರ್ಬಂಧಕ್ಕೆ ಒಳಗಾಗುವುದು ಒಳಿತು ಎಂದು ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಎಸ್ಡಿಎಂ ಸರ್ಕಾರ-ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡುತ್ತಿದೆ. ವೈದ್ಯರು, ನರ್ಸ್ಗಳ ಸೇವೆ ಅನನ್ಯ. ಕೋವಿಡ್ ಬಗ್ಗೆ ಮಾಧ್ಯಮಗಳು ಭಯ ಸೃಷ್ಟಿಸದೇ, ಜಾಗೃತಿ ಮೂಡಿಸಬೇಕು. ಶೇ.೬೪ರಷ್ಟು ಜನ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದರು.
ಗೂಗಲ್ ಮೀಟ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ವಿಷಮ ಪರಿಸ್ಥಿತಿ ಎದುರಿಸಬೇಕಿದೆ. ಸೋಂಕಿನ ಸರಪಳಿ ತುಂಡರಿಸಲು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಜೊತೆಗೆ ಹೆಚ್ಚು ಪರೀಕ್ಷೆಗಳೂ ಆಗಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಭಯಾನಕ ಕಾಯಿಲೆಯಲ್ಲ, ಕಳೆದ ೧೦ ವರ್ಷಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುವ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ಆತ್ಮವಿಶ್ವಾಸದಿಂದ ಕೋವಿಡ್ನಿಂದಲೂ ಗುಣಮುಖರಾಗಿರುವುದನ್ನು ಗಮನಿಸಿದಾಗ ಸಾರ್ವಜನಿಕರ ಆತ್ಮಸ್ಥೆöರ್ಯ ಹೆಚ್ಚುತ್ತದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಎಸ್ಡಿಎಂನಲ್ಲಿ ಕೋವಿಡ್ ತಪಾಸಣೆ ಕೇಂದ್ರ ಸ್ಥಾಪನೆಯಿಂದ ಐಸಿಎಂಆರ್ ಹಾಗೂ ಎನ್ಎಬಿಎಲ್ ಮಾನ್ಯತೆ ಶೀಘ್ರ ದೊರಕಿದೆ. ಕೋವಿಡ್ ವಿರುದ್ಧ ಹೋರಾಡುವ ವೈದ್ಯರು, ಅರೆವೈದ್ಯಕೀಯ, ಸಿಬ್ಬಂದಿ ಪರಿಶ್ರಮ ಶ್ಲಾಘನೀಯ ಎಂದರು.
ಈ ವೇಳೆ ಎಸ್ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನಕುಮಾರ, ಪ್ರಾಚಾರ್ಯೆ ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕ ಡಾ.ಕಿರಣ ಹೆಗಡೆ, ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ಆರ್.ಡಿ.ಕುಲಕರ್ಣಿ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ ಕಲ್ಲಾಪುರ ಇದ್ದರು.