ಶಿವಮೊಗ್ಗ: ಕೋಮು ಗಲಬೆ ಸೃಷ್ಟಿಸುತ್ತಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಗೃಹ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆಹಳ್ಳಿ ಗಲಭೆಯ ಹಿಂದೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಇಂತಹ ರಕ್ಕಸ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟ ಈ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕು. ಈ ಘಟನೆಯ ಹಿಂದೆ ಷಡ್ಯಂತ್ರ ಅಡಗಿದ್ದು, ಇದು ವ್ಯವಸ್ಥಿತ ಸಂಚಾಗಿದೆ ಎಂದು ದೂರಿದ್ದಾರೆ.
ಮನೆಗಳಿಗೆ, ವಾಹನಹಳನ್ನು ಅಮಾನವೀಯವಾಗಿ ಸುಟ್ಟು ಹಾಕಲಾಗಿದೆ. ಪೊಲೀಸ್ ಮತ್ತು ಮಾಧ್ಯಮ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲಾಗಿದೆ. ಅವರ ವಾಹನಗಳನ್ನು ಸುಟ್ಟು ಹಾಕಲಾಗಿದೆ. ಇದೊಂದು ಪೈಶಾಚಿಕ ಕೃತ್ಯವಾಗಿದೆ. ಮಂಗಳೂರಿನಲ್ಲಿ ನಡೆದ ಗಲಭೆಯ ಮುಂದುವರೆದ ಭಾಗವೇ ಇದಾಗಿದೆ. ಇದರಿಂದ ಜನಸಾಮಾನ್ಯರು ಭಯಭೀತರಾಗುವಂತಾಗಿದೆ. ದುಷ್ಕರ್ಮಿಗಳಿಗೆ ಕಾನೂನಿ ಬಗ್ಗೆ ಹೆದರಿಕೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ರಾಷ್ಟ್ರವಿದ್ರೋಹಿ ಕೃತ್ಯವಾಗಿದ್ದು, ಪಾಕಿಸ್ಥಾನದ ಐಎಸ್ಐ ಸಂಘಟನೆಯ ಕೈವಾಡ ಶಂಕೆಯೂ ಇದೆ. ಈ ಘಟನೆಯನ್ನು ರಾಷ್ಟ್ರೀಯ ತನಿಖಾದಳದ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.