ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ನುರಿತ ವೈದ್ಯರುಗಳ ತಂಡ ಎಸ್ಪಿಬಿ ಆರೋಗ್ಯದ ಮೇಲೆ ನಿಗಾ ಇರಿಸಿದ್ದು, ಕಾಳಜಿ ವಹಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಎಸ್ಪಿಬಿ ಆ.5 ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸೆ. 7 ರಂದು ಎಸ್ಪಿಬಿ ಅವರಿಗೆ ಕೊರೊನಾ ನೆಗೆಟಿವ್ ದೃಢಪಟ್ಟಿತ್ತು ಎಂದು ಚರಣ್ ತಿಳಿಸಿದ್ದರು. ಬಳಿಕ ಅದರಿಂದ ಅವರು ಗುಣಮುಖರಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದ ಅವರು ಆಸ್ಪತ್ರೆಯಲ್ಲಿಯೇ ಮದುವೆ ವಾರ್ಷಿಕೋತ್ಸವ ಕೂಡಾ ಆಚರಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಅವರು ಗುಣಮುಖರಾಗುತ್ತಿದ್ದಾರೆ ಎಂದು ಅವರ ಮಗ ಚರಣ್ ಮಾಹಿತಿ ನೀಡಿದ್ದರು. ಅಲ್ಲದೆ, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇದೀಗ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅವರ ಆರೈಕೆ ಮಾಡುತ್ತಿರುವ ವೈದ್ಯರು ತಿಳಿಸಿದ್ದಾರೆ.