Sunday, July 3, 2022

Latest Posts

ಎಸ್‌ಸಿಡಿಸಿಸಿ ಬ್ಯಾಂಕ್ 1 ಕೋಟಿ ರೂ.ನೆರವು

ಮಂಗಳೂರು: ಕೋವಿಡ್-19 ಎಂಬ ವೈರಾಣು ಭಾರತದಲ್ಲಿ ಹರಡುತ್ತಿರುವ ಸಾಂಕ್ರಾಮಿಕ  ರೋಗವನ್ನು  ತಡೆಗಟ್ಟಲು ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ಸಮಾರೋಪಾದಿ ಕ್ರಮ ಕೈಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೂ.1 ಕೋಟಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರೂ.50 ಲಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಂದು ದಿನದ ವೇತನವನ್ನು ನೀಡಲಿದ್ದು ಮಾತ್ರವಲ್ಲ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನಿಂದ  50 ಸಾವಿರ ಮಾಸ್ಕನ್ನು ನೀಡಲಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರಿ ಸಂಘ, ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಮಸ್ತ ಜನತೆ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಹೆಚ್ಚಿನ ಆರ್ಥಿಕ ನೆರವನ್ನು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.

ಈ ಸಂಕಷ್ಟಮಯ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಕೈಜೋಡಿಸುವುದು ಸಹಕಾರಿಗಳೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಸರ್ಕಾರದ ಜೊತೆ ಸಹಕಾರ ಕ್ಷೇತ್ರವು ಕೈಜೋಡಿಸುವ ಮುಖಾಂತರ ವೈದ್ಯಕೀಯ ಸಾಮಾಗ್ರಿಗಳನ್ನು ಹಾಗೂ ಸೋಂಕಿತರ ಚಿಕಿತ್ಸೆಗೆ ಆರ್ಥಿಕ ನೆರವನ್ನು ಸರ್ಕಾರಕ್ಕೆ ನೀಡಬೇಕಾಗಿರುವುದು ಸಹಕಾರಿಗಳೆಲ್ಲರ ಕರ್ತವ್ಯವಾಗಿದೆ ಎಂದವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿಕೊಂಡಿದ್ದು ಈ ನಿಟ್ಟಿನಲ್ಲಿ ಸಹಕಾರಿಗಳೆಲ್ಲರೂ, ಸಹಕಾರಿ ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಮಸ್ತ ಜನ ಒಗ್ಗೂಡಿ ಗರಿಷ್ಠ ದೇಣಿಗೆಯನ್ನು SCDCC Bank, Kodialbail Branch A/c No. 505/757 COVID-19 Relief Fund ಖಾತೆಗೆ ನಗದು/ ಚೆಕ್/ ಆರ್.ಟಿ.ಜಿ.ಎಸ್. ಮುಖಾಂತರ ನೀಡುವಂತೆ ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.

ಸಂಗ್ರಹವಾದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೂಲಕ ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ರಾಜೇಂದ್ರಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ 105 ಶಾಖೆಗಳ ವ್ಯವಹಾರದ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ನಿಗದಿಗೊಳಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಸಹಕಾರ ಸಂಘಗಳಿಗೂ ಇದೇ ಸಮಯದಲ್ಲಿ ವ್ಯವಹಾರ ನಡೆಸುವಂತೆ ಸೂಚಿಸಲಾಗಿದೆ. ರೈತರಿಗೆ ಅಡಕೆ ಅಡಮಾನ ಸಾಲ ನೀಡುವುದು ಮತ್ತು ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುವುದರ ಜತೆಗೆ ಸಹಕಾರ ಸಂಸ್ಥೆಗಳು ಬ್ಯಾಂಕಿಂಗ್ ಸೇವೆಯನ್ನು ನಿಗದಿತ ಸಮಯದಲ್ಲಿ ನೀಡುವಂತೆಯೂ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ಕೃತಜ್ಞತೆ: ದೇಶಕ್ಕೆ ಬಂದಿರುವ ಕೊರೊನಾ ವೈರಸ್ ಮಹಾಮಾರಿಯನ್ನು ನಿಗ್ರಹಿಸುವ ದೃಷ್ಟಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕಾರ್ಯಗಳು ಜನಮೆಚ್ಚುಗೆ ಪಡೆದಿದ್ದು, ಮುಖ್ಯಮಂತ್ರಿಯವರು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರೊಂದಿಗೆ ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮವು ಕೈಜೋಡಿಸಿರುವುದು ಪ್ರಶಂಸನೀಯ. ಸಮಸ್ತ ಸಹಕಾರಿಗಳ ಪರವಾಗಿ ಇವರೆಲ್ಲರಿಗೂ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಅವರು ಕೃತಜ್ಞತೆಯನ್ನು ಸಲ್ಲಿಸಿ ಸಮಸ್ತ ಸಹಕಾರಿಗಳು ಈ ಸಾಂಕ್ರಮಿಕ ರೋಗ ತಡೆಗಟ್ಟುವಲ್ಲಿ ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

ಸಾಮಾಜಿಕ ಸ್ಪಂದನೆ: ಈ ಹಿಂದೆ ದೇಶಕ್ಕೆ ಹಾಗೂ ರಾಜ್ಯಕ್ಕೆ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಸಹಕಾರಿಗಳೆಲ್ಲರೂ ಹೆಚ್ಚಿನ ಆರ್ಥಿಕ ನೆರವು ನೀಡಿ ಸಾಮಾಜಿಕ ಸ್ಪಂದನೆ ಮೆರೆದಿದ್ದರು ಎಂದು ಡಾ. ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

1999ರ ಕಾರ್ಗಿಲ್ ಯುದ್ಧ, 2001ರ ಗುಜರಾತ್ ಭೂಕಂಪ, 2004ರ ಸುನಾಮಿ, 2009ರ ಉತ್ತರ ಕರ್ನಾಟಕದ ನೆರೆ ಪರಿಹಾರ, 2013ರ ಉತ್ತರಾಖಂಡ ಜಲಪ್ರಳಯ, 2015ರ ತಮಿಳುನಾಡು ಪ್ರಕೃತಿ ವಿಕೋಪ, 2018ರ ಕೇರಳ ಹಾಗೂ ಕೊಡಗು ನೆರೆ ಸಂತ್ರಸ್ತರಿಗೆ ಹಾಗೂ 2019ರ ಉತ್ತರ ಕರ್ನಾಟಕ, ಕೊಡಗು ಹಾಗೂ ಕರಾವಳಿ ಜಿಲ್ಲೆಗಳ ನೆರೆಪೀಡಿತ ಸಂತ್ರಸ್ತರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಹಾಗೂ ಸಹಕಾರಿ ಸಂಸ್ಥೆಗಳು ಸ್ಪಂದಿಸಿ ಅಪಾರ ದೇಣಿಗೆಯನ್ನು ರಾಜ್ಯ ಸರ್ಕಾರಕ್ಕೆ ಸಮರ್ಪಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss