ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಎಸ್. ಅಶ್ವಿನಿಯ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಹಾಳೆಗಳನ್ನು ಅದಲು-ಬದಲು ಮಾಡಿರುವವರ ವಿರುದ್ಧ ಹಾಗೂ ಜವಾಬ್ದಾರಿ ನಿರ್ವಹಿಸದೆ ಲೋಪ ಎಸಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಕರ್ನಾಟಕ ಮಾನವ ಹಕ್ಕುಗಳ ವೇದಿಕೆಯ ಎಂ.ಎಲ್. ತುಳಸೀಧರ್ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ಜಿ.ಎಸ್. ಅಶ್ವಿನಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿರುವುದರಿಂದ ಉತ್ತರ ಪತ್ರಿಕೆಯ ನಕಲು ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿ ಉತ್ತರ ಪತ್ರಿಕೆಗಳನ್ನು ನೋಡಲಾಗಿ ಬಹುತೇಕ ಹಾಳೆಗಳು ಅದಲುಬದಲಾಗಿರುವುದು ಕಂಡುಬಂದಿದೆ.
ಆಂಗ್ಲ ಭಾಷೆಯಲ್ಲಿ 100ಕ್ಕೆ 89 ಅಂಕ ಪಡೆದಿರುವ ಅಶ್ವಿನಿ ಕನ್ನಡ ಭಾಷೆಯಲ್ಲಿ 125ಕ್ಕೆ ಕೇವಲ 4, ಸಮಾಜ ವಿಜ್ಞಾನದಲ್ಲಿ 7, ಹಿಂದಿ ಭಾಷೆಯಲ್ಲಿ 33, ಗಣಿತದಲ್ಲಿ 45, ವಿಜ್ಞಾನದಲ್ಲಿ 53 ಅಂಕ ಬಂದಿರುವುದಾಗಿ ಉತ್ತರ ಪತ್ರಿಕೆಗಳ ಪ್ರತಿಯಲ್ಲಿ ಹೇಳಲಾಗಿದೆ. ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೊದಲ ಪುಟ ಹೊರತುಪಡಿಸಿ ಉಳಿದ ಪುಟಗಳನ್ನು ಬದಲಾಯಿಸಲಾಗಿದೆ. ಹಿಂದಿ ಪತ್ರಿಕೆಯ ಕೆಲವು ಪುಟಗಳು ಬದಲಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಗೆ ವಂಚನೆಯಾಗಿದ್ದು, ಆಕೆಯ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.