ಕೋಲಾರ: ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆ ಕೋಡಿಗೆ ಭಾನುವಾರ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಹಸೀಲ್ದಾರ್ ಶೋಭಿತಾರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪತ್ರಕರ್ತರ ಭವನದಲ್ಲಿ ಜರುಗಿತು.
ಕೋಲಾರ ಜಿಲ್ಲೆ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಿರಿಯ ಕ್ರೀಡಾಪಟುಗಳಿಗೆ ಸನ್ಮಾನಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿತು.
ಕಾರ್ಯಕ್ರಮ ವೇದಿಕೆ ಮೇಲೆ ಆಸೀನರಾಗಿದ್ದ ಉಸ್ತುವಾರಿ ಸಚಿವ ಎಚ್.ನಾಗೇಶ್ರ ಹಿಂಬಾಗಕ್ಕೆ ಬಂದ ತಹಸೀಲ್ದಾರ್ ಶೋಭಿತಾ ಭಾನುವಾರ ಭಾಗಿನ ಕಾರ್ಯಕ್ರಮ ಕುರಿತಂತೆ ಸ್ಪಷ್ಟನೆ ನೀಡಲು ಮುಂದಾದರು.
ತಹಸೀಲ್ದಾರ್ರ ಯಾವುದೇ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧರಿರದ ಸಚಿವ ನಾಗೇಶ್, ಡಿಸಿ, ಇಲಾಖೆಯ ಸಚಿವ ಮಾಧುಸ್ವಾಮಿ ಹಾಗೂ ಮೇಲಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದೇನೆ, ನಿಮ್ಮ ವಿವರಣೆ ಏನಿದ್ದರೂ ಅವರಿಗೆ ನೀಡಿ ನನಗಲ್ಲ ಎಂದು ಗರಂ ಆದರು.
ಆಗ ಪಕ್ಕದಲ್ಲಿಯೇ ಕುಳಿತಿದ್ದ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಭಾಗಿನ ಕಾರ್ಯಕ್ರಮಕ್ಕೆ ತಮಗೂ ಆಹ್ವಾನ ಇರಲಿಲ್ಲ, ಜಿಲ್ಲೆಗೆ ತೋಟಗಾರಿಕೆ ಸಚಿವ ಬಿ.ಸಿ.ಪಾಟೀಲ್ ಬಂದಾಗಲೂ ತಮಗೆ ಕನಿಷ್ಠ ದೂರವಾಣಿ ಕರೆಯ ಆಹ್ವಾನವೂ ಇರಲಿಲ್ಲ, ತಮಗೆ ಆಪ್ತ ಕಾರ್ಯದರ್ಶಿ ನೇಮಕ ಮಾಡುವ ವಿಚಾರದಲ್ಲೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ತಮಗೆ ಗೊತ್ತಿದೆ ಈ ಕುರಿತು ಎಲ್ಲಿ ಮಾತನಾಡಬೇಕು ಎಂದು ತಹಸೀಲ್ದಾರ್ ಶೋಭಿತಾರನ್ನು ಪ್ರಶ್ನಿಸಿದರು.
ಇದರಿಂದ ತಬ್ಬಿಬ್ಬಾದ ತಹಸೀಲ್ದಾರ್ ಇಬ್ಬರಲ್ಲೂ ಕ್ಷಮೆಯಾಚಿಸಿ ಭಾಗಿನ ಕಾರ್ಯಕ್ರಮ ಖಾಸಗಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಇತ್ಯಾದಿಯಾಗಿ ಹೇಳಲು ಮುಂದಾದರೂ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಇದರಿಂದ ಪೆಚ್ಚಾದ ತಹಸೀಲ್ದಾರ್ ಇನ್ನು ಮುಂದೆ ಹೀಗೆ ಆಗಲು ಬಿಡುವುದಿಲ್ಲ ಸಾರ್ ಎಂದಷ್ಟೇ ಹೇಳಿ ಮೌನಕ್ಕೆ ಶರಣಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.