ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ) ನಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಬ್ಯಾಂಕ್ ಸಿಹಿ ಸುದ್ದಿ ನೀಡಿದ್ದು, ಕನಿಷ್ಠ ಠೇವಣಿ ಉಳಿಸಿಕೊಳ್ಳದ ಖಾತೆದಾರರಿಗೆ ವಿಧಿಸುತ್ತಿದ್ದ ಶುಲ್ಕ ರದ್ದುಗೊಳಿಸಿದೆ. ಇದರಿಂದ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ 44.51 ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದೆ.
ಇದುವರೆಗೆ ಮೆಟ್ರೋಪಾಲಿಟನ್ ನಗರ, ಉಪನಗರ ಹಾಗೂ ಗ್ರಾಮೀಣ ಭಾಗದಲ್ಲಿ ಖಾತೆ ಹೊಂದಿದವರು ಕ್ರಮವಾಗಿ 10 ಸಾವಿರ, 3 ಸಾವಿರ ಹಾಗೂ 2 ಸಾವಿರ ರೂಪಾಯಿಯನ್ನು ಖಾತೆಯಲ್ಲಿ ಕನಿಷ್ಠ ಮೊತ್ತದ ಹಣವಾಗಿ ಉಳಿಸಬೇಕಿತ್ತು. ಆದರೆ ಎಸ್ ಬಿ ಐ ನೂತನ ನಿರ್ಧಾರದಿಂದಾಗಿ ಕನಿಷ್ಠ ಹಣ ಉಳಿಸಿಕೊಳ್ಳಬೇಕು ಎಂಬ ಅನಿವಾರ್ಯ ಇಲ್ಲವಾಗಿದೆ.
ಎಫ್ ಡಿ ಮೇಲಿನ ಬಡ್ಡಿ ಇಳಿಕೆ: ಒಂದೆಡೆ ಉಳಿತಾಯ ಖಾತೆದಾರರಿಗೆ ಎಸ್ ಬಿ ಐ ಅನುಕೂಲ ಮಾಡಿದರೆ, ಇತ್ತ ಸ್ಥಿರ ಠೇವಣಿದಾರರಿಗೆ ಕಹಿ ಸುದ್ದಿ ನೀಡಿದೆ. ಹೌದು, ಸ್ಥಿರ ಠೇವಣಿ ಮೇಲಿನ ಬಡ್ಡಿಯನ್ನು ಸತತ ಹತ್ತನೇ ಬಾರಿಗೆ ಹಾಗೂ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ 50 ಮೂಲಾಂಕ ಕಡಿತಗೊಳಿಸಿದ್ದು, ಇದರಿಂದ ಸ್ಥಿರ ಠೇವಣಿ ಇಡುವವರಿಗೆ ಬಡ್ಡಿ ಹಣ ಗಳಿಕೆಯಲ್ಲಿ ಇಳಿಮುಖವಾಗಲಿದೆ.
ಸ್ಥಿ ರ ಠೇವಣಿದಾರರು 7 ರಿಂದ 45 ದಿನಗಳವರೆಗೆ ಇಡುವ ಠೇವಣಿಗೆ ಈ ಮೊದಲು ಶೇ.4.5 ಬಡ್ಡಿ ದೊರೆಯುತ್ತಿದ್ದು, ಇನ್ನುಮುಂದೆ ಶೇ.4 ದೊರೆಯುತ್ತದೆ. ಒಂದು ವರ್ಷ ಅಥವಾ ಅಧಿಕ ಅವಧಿಗೆ ಇಡುವ ಸ್ಥಿರ ಠೇವಣಿಗೆ 10 ಅಂಕಗಳು ಕಡಿಮೆಯಾಗಿವೆ. ಒಂದರಿಂದ ಎರಡು ವರ್ಷಗಳಿಗೆ ಅವಧಿಗೆ ಇಡುವ ಎಫ್ ಡಿ ಗೆ ಶೇ.5.9 ಬಡ್ಡಿ ದೊರೆಯುತ್ತಿದ್ದು, ಈ ಮೊದಲು ಶೇ.6 ರಂತೆ ದೊರೆಯುತ್ತಿತ್ತು.
ಹಿರಿಯ ನಾಗರಿಕರ ಠೇವಣಿಗೆ ಕೂಡ ಶೇ.6.50 ರಂತೆ ಇದ್ದ ಬಡ್ಡಿಯನ್ನು ಶೇ.6.40 ಗೆ ಇಳಿಸಲಾಗಿದೆ. 180 ದಿನಗಳಿಗೆ ಅಥವಾ ಅಧಿಕ ದಿನಗಳಿಗೆ ಇಡಲಾಗುವ ಠೇವಣಿಗೆ (2 ಕೋಟಿ ರೂ.ಗಿಂತ ಕಡಿಮೆ)ಬಡ್ಡಿ ಶೇ.15ರಷ್ಟು ಕಡಿಮೆಯಾಗಿದೆ ಎಂದು ಎಸ್ಬಿಐ ತಿಳಿಸಿದೆ.