ಈಗಿನ ದಿನಗಳಲ್ಲಿ ಪ್ರೇಕ್ಷಕರನ್ನು ಸಿನಿಮಾ ಚೆನ್ನಾಗಿದೆ ನೋಡಬನ್ನಿ ಎಂದರೆ ಅವರು ಬರೋದಿಲ್ಲ. ಅವರಿಗೆ ಹಂತ ಹಂತವಾಗಿ ಚಿತ್ರದ ಬಗ್ಗೆ ರುಚಿ ಹತ್ತಿಸಿ, ಈ ಸಿನಿಮಾವನ್ನು ನೋಡಲೇಬೇಕು ಅನ್ನಿಸೋಮಟ್ಟಿಗೆ ಪ್ರಿಪೇರ್ ಮಾಡಬೇಕು. ಆಗ ರೆಗ್ಯುಲರ್ ಆಗಿ ಥಿಯೇಟರಿಗೆ ಬರುವವರು, ಆನಂತರ ಸ್ಟೂಡೆಂಟ್ಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ಥಿಯೇಟರಿನತ್ತ ಬರುತ್ತಾರೆ. ಈ ನಿಟ್ಟಿನಲ್ಲಿ ಎ.ಪಿ. ಅರ್ಜುನ್ ಪಕ್ಕಾ ಕಸುಬುದಾರ ನಿರ್ದೇಶಕ. ಇವರಿಗೆ ಯಾವ ಸಂದರ್ಭದಲ್ಲಿ ಎಂಥಾ ಚಿತ್ರ ಮಾಡಬೇಕು? ಟ್ರೆಂಡ್ ಹುಟ್ಟು ಹಾಕುವಂಥಾ ಟ್ಯೂನುಗಳನ್ನು ಹೆಕ್ಕೋದು ಹೇಗೆ? ಅದನ್ನು ತೀರಾ ಹೊಸದೆನ್ನುವಂತೆ ದೃಶ್ಯರೂಪದಲ್ಲಿ ಕಟ್ಟಿಕೊಡುವ ಬಗೆ ಯಾವುದು? ಅನ್ನೋದು ಕರಾರುವಕ್ಕಾಗಿ ತಿಳಿದಿದೆ. ಮುಖ್ಯವಾಗಿ ಕಾಲೇಜು ಹುಡುಗ ಹುಡುಗಿಯರನ್ನು ಸೆಳೆಯುವ ಮಾಂತ್ರಿಕ ವಿದ್ಯೆ ಅರ್ಜುನ್ಗೆ ಸಿದ್ಧಿಸಿದೆ. ಕಿಸ್ ಸಿನಿಮಾವನ್ನು ನೋಡಿದವರಲ್ಲಿ ಕೂಡಾ ಅತಿ ಹೆಚ್ಚು ಜನ ಇದೇ ವರ್ಗಕ್ಕೆ ಸೇರಿದವರೇ. ನೀನೆ ಮೊದಲು, ನೀನೇ ಕೊನೆ ಅನ್ನೋ ಹಾಡು ಎಳೇ ಹುಡುಗರ ಎದೆಗೆ ಬಾಣದಂತೆ ನಾಟಿಕೊಂಡಿತ್ತು. ಶೀಲ ಸುಶೀಲ ಹಾಡನ್ನು ತೆರೆ ಮೇಲೆ ಯಾವಾಗ ನೋಡ್ತೀವೋ ಅಂತಾ ಪಡ್ಡೆ ಹುಡುಗರು ಮೈಕುಣಿಸಿಕೊಂಡು ಕಾಯುತ್ತಿದ್ದರು. ನಿರೀಕ್ಷೆಯಂತೇ ಚಿತ್ರ ಥಿಯೇಟರಿಗೆ ಬಂದಕೂಡಲೇ ನುಗ್ಗಿ ನೋಡಿದರು. ಈ ಎಲ್ಲದರ ಪ್ರತಿಫಲವೆನ್ನುವಂತೆ ಕಿಸ್ ಚಿತ್ರ ಈಗ ನೂರು ದಿನಗಳನ ಸಂಭ್ರಮ ಆಚರಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಎ.ಪಿ.ಅರ್ಜುನ್ ಸಿನಿಮಾಕ್ಕೆ ದುಡಿದವರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರವನ್ನು ಕೂಡ ಅನೌನ್ಸ್ ಮಾಡಿದರು.
ವೇದಿಕೆಯಲ್ಲಿ ಅರ್ಜುನ್ ಅವರ ನಿರ್ದೇಶನದ ಹೊಸ ಚಿತ್ರ ಅದ್ದೂರಿ ಲವರ್ನ ಪೋಸ್ಟರ್ ಕೂಡ ಅನಾವರಣಗೊಳಿಸಲಾಯಿತು.
ಹಿರಿಯ ನಟ ದತ್ತಣ್ಣ ಫಲಕ ವಿತರಣೆ ಮಾಡಿ ನಂತರ ಮಾತನಾಡುತ್ತಾ ನಾಯಕ, ನಾಯಕಿ ಇಬ್ಬರೂ ಹೊಸಬರನ್ನು ಇಟ್ಟುಕೊಂಡು ಅರ್ಜುನ್ 100 ದಿವಸ ಆಟವಾಡಿಸಿದ್ದಾರೆ. ರಾಜಕುಮಾರ, ಯಜಮಾನ ಚಿತ್ರಗಳ ನಂತರ ಈಗ ಕಿಸ್ ನೂರು ದಿನ ಕಂಡಿದೆ. ನಾನು ಈ ಮೂರರಲ್ಲೂ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಎಂದರು.
ನಂತರ ಮಾತನಾಡಿದ ಅರ್ಜುನ್ ಪ್ರತಿಯೊಬ್ಬ ನಿರ್ಮಾಪಕರಿಗೂ ನೂರು ದಿನ ಪ್ರದರ್ಶನ ಕಾಣುವ ಚಿತ್ರ ಮಾಡಬೇಕೆಂಬ ಬಯಕೆ ಇರುತ್ತದೆ. ನಾವು ಕಷ್ಟಪಟ್ಟು ಪ್ರೀತಿಯಿಂದ ಮಾಡಿದ್ದನ್ನು ಜನ ಮುತ್ತುಕೊಟ್ಟು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ. ಒಬ್ಬ ನಿರ್ದೇಶಕ, ನಿರ್ಮಾಪಕ ಆದಾಗ ಅದರ ಕಷ್ಟ ಏನೆಂಬುದನ್ನು ಇಲ್ಲಿ ತಿಳಿದುಕೊಂಡೆ. ಆ ಸ್ಥಾನಕ್ಕೆ ಬಂದ ಸಮಯದಲ್ಲಿ ನನ್ನ ಖಾತೆಯಲ್ಲಿ ಕೇವಲ 268 ರೂ. ಇತ್ತು. ಗೆಳೆಯರು, ಹಿತೈಷಿಗಳು ನನಗೆ ಒಳ್ಳೆಯದಾಗಲೆಂದು ಸಹಾಯ ಮಾಡಿದ್ದರಿಂದಲೇ ಒಂದೂವರೆ ಕೋಟಿ ಹಣ ಸಂದಾಯವಾಯಿತು. ಇದರಲ್ಲಿ ಚಿಕ್ಕಣ್ಣನ ಪಾಲೂ ಇದೆ. ಪ್ರತಿಯೊಬ್ಬರೂ ನಿರ್ಮಾಪಕರಾಗಿದ್ದರೂ ಸಹ ಪೋಸ್ಟರ್ ನಲ್ಲಿ ನನ್ನ ಹೆಸರು ಮಾತ್ರ ಇದೆ ಅಷ್ಟೇ. ಸೆಟ್ ಬಾಯ್ ನಿಂದ ಹಿಡಿದು ಕಲಾವಿದರು, ಪ್ರಚಾರಕರ್ತರು, ಮಾಧ್ಯಮಗಳ ಸಹಕಾರದಿಂದಲೇ ಈ ಯಶಸ್ಸು ಸಿಕ್ಕಿದೆ. ಹರಿಕೃಷ್ಣ ಅವರ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಇರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು ಎಂದರು.