Thursday, July 7, 2022

Latest Posts

ಏಕರೂಪಿಯಿಂದ ಬಹುರೂಪಿಯೆಡೆಗೆ ರಂಗಾಯಣ

ರಂಗ ಭೂಮಿಯಲ್ಲಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶದಾದ್ಯಂತ ತನ್ನ ಹೆಗ್ಗುರುತು ಮೂಡಿಸಿರುವ ‘ಕರ್ನಾಟಕ ಸರ್ಕಾರದ’ ರಂಗಾಯಣದ ಬಹುಮುಖ್ಯ ಉತ್ಸವ ‘ಬಹುರೂಪಿ ನಾಟಕೋತ್ಸವ’. ಬಹುರೂಪಿ ನಾಟಕೋತ್ಸವದ ಇನ್ನೊಂದು ಪ್ರಮುಖ ಕಾರ್ಯಕ್ರಮ, ರಾಷ್ಟ್ರೀಯ ವಿಚಾರ ಸಂಕಿರಣ. ಪ್ರತಿ ವರ್ಷವೂ ಬಹುರೂಪಿ ಒಂದು ಹೊಸ ಶೀರ್ಷಿಕೆಯೊಂದಿಗೆ ಆಯೋಜಿಸಲ್ಪಡುತ್ತಾ ಬಂದಿದೆ. ಹಾಗೆ ನೀಡಲಾಗುವ ಶೀರ್ಷಿಕೆಯ ಸುತ್ತಲೇ ಇಡೀ ಬಹುರೂಪಿಯ ನಾಟಕಗಳು, ಚರ್ಚೆಗಳು, ವಿಚಾರ ಸಂಕಿರಣಗಳು ಎಲ್ಲವೂ ನಡೆಯುತ್ತವೆ. ಈ ವರ್ಷ ಆಯೋಜಿಸಲಾಗಿರುವ ಬಹುರೂಪಿಯ ಘೋಷ ವಾಕ್ಯ ‘ಗಾಂಧಿ ಪಥ’. ಅಂದರೆ ಒಂದು ವಾರವಿಡೀ ನಡೆಯುವ ಈ ಬಾರಿಯ ಬಹುರೂಪಿ ನಾಟಕೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲೂ ಗಾಂಧಿಯೇ ಆವರಿಸಿರುತ್ತಾರೆ.

ಆದರೆ ಈ ಹಿಂದೆ ಅದೇ ರಂಗಾಯಣದಲ್ಲೇ ಉನ್ನತ ಹುದ್ದೆ ನಿರ್ವಹಿಸಿದ್ದ ಕೆಲವರು, “ಏಕರೂಪಿ ಮನಃಸ್ಥಿತಿ ಹೊಂದಿರುವ ವ್ಯಕ್ತಿಯಿಂದ ಬಹುರೂಪಿ ನಡೆಯಲು ಸಾಧ್ಯವಿಲ್ಲ” ಎನ್ನುವ ಹೇಳಿಕೆಯೊಂದಿಗೆ, ಈಗಿನ ನಿರ್ದೇಶಕರ ನೇತೃತ್ವದ ಬಹುರೂಪಿ ನಾಟಕೋತ್ಸವವನ್ನು ವಿರೋಧಿಸುತ್ತಿದ್ದಾರೆ. ಬಹುರೂಪಿ ಒಂದು ಬಹು ಸಂಸ್ಕೃತಿಯ ಉತ್ಸವವಾಗಿದ್ದು, ಏಕರೂಪಿ ಮನಃಸ್ಥಿತಿಯನ್ನು ವಿರೋಧಿಸುವುದಾಗಿ ಹೇಳುತ್ತಾ, ಅವರುಗಳು ಈ ಬಾರಿಯ ಬಹುರೂಪಿಯೊಂದಿಗೆ ಕೈ ಜೋಡಿಸಲು ನಿರಾಕರಿಸಿದ್ದಾರೆ!
ಆದರೆ ಒಬ್ಬ ಜನಸಾಮಾನ್ಯನಾಗಿ ನೋಡಿದಾಗ ನಮಗೆ, ಸರ್ಕಾರದ ಅನುದಾನದಲ್ಲಿ ನಡೆಯುತ್ತಾ ಬಂದಿದ್ದ ಈ ಹಿಂದಿನ ಬಹುರೂಪಿಗಳನ್ನೇ ಏಕರೂಪಿ ಮನಃಸ್ಥಿತಿಯವರು ತಮ್ಮ ಹಬ್ಬವನ್ನಾಗಿ ಮಾಡಿಕೊಂಡಿದ್ದು ಮತ್ತು ಅಲ್ಲಿ ನಡೆಯುತ್ತಿದ್ದ ಎಲ್ಲವೂ ಏಕರೂಪಿ ಚಿಂತನೆಗಳೇ ಆಗಿದ್ದು ಅನುಭವಕ್ಕೆ ಬರುತ್ತದೆ. ಈ ಹಿಂದೆ ಹಲವಾರು ಬಹುರೂಪಿಗಳೆಲ್ಲದರಲ್ಲೂ ದೇಶಕ್ಕೆ ಯಾವುದು ತೊಂದರೆಯನ್ನುಂಟುಮಾಡಬಲ್ಲುದೋ ಅದರ ಪರವಾಗಿಯೇ ಜೋರು ಧ್ವನಿಗಳು ಮೊಳಗಿರುವುದು ಕಂಡುಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಲ್ಲಿನ ಸಂಸ್ಕೃತಿಗೆ ಧಕ್ಕೆ ತರುವ ಯಾವೆಲ್ಲಾ ಅಂಶಗಳನ್ನು ಎತ್ತಬಹುದೋ, ಆ ಅಂಶಗಳನ್ನೇ ಪ್ರಧಾನವಾಗಿಸಿ,ಇಲ್ಲಿನ ಸಂಸ್ಕೃತಿಗೆ ಧಕ್ಕೆ ತರುವ ಹುನ್ನಾರ ನಡೆಸಿದ್ದು ಎದ್ದು ಕಾಣಿಸುತ್ತದೆ.

ಉದಾಹರಣೆಗೆ; ಕಳೆದ ವರ್ಷದ ಬಹುರೂಪಿಯನ್ನೇ ತೆಗೆದುಕೊಂಡರೂ, ಅದರಲ್ಲಿ ‘ಲಿಂಗ ಸಮಾನತೆ’ ಎನ್ನುವುದನ್ನು ಶೀರ್ಷಿಕೆಯನ್ನಾಗಿ ಆಯ್ದುಕೊಳ್ಳಲಾಗಿತ್ತು. ಅರೆ! ಅದರಲ್ಲೇನು ತಪ್ಪು ಎಂದು ನೀವು ಕೇಳಬಹುದು.ತಪ್ಪೇನೂ ಇಲ್ಲ. ಆದರೆ ಅದೇ ವಿಚಾರವನ್ನು ಆ ವರ್ಷದ ಘೋಷ ವಾಕ್ಯವನ್ನಾಗಿ ಏಕೆ ಆಯ್ದುಕೊಳ್ಳಲಾಯಿತು ಎನ್ನುವುದನ್ನು ಹುಡುಕುತ್ತಾ ಹೋದರೆ ನಮಗೆ ಸಿಗುವುದು ಕಮ್ಯುನಿಸ್ಟ್ ಆಡಳಿತದ ಕೇರಳದ ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಹಾಳು ಮಾಡಲೆಂದೇ ಕೆಲವು ನಾಸ್ತಿಕ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ದೇವಾಲಯದೊಳಗೆ ನುಗ್ಗಿಸಲಾದ ಪ್ರಕರಣ.

ಆ ಒಂದೇ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವುದಾದರೆ ಆ ಒಂದು ದೇವಾಲಯದಲ್ಲಿ ಮಾತ್ರ ಆ ನಿಯಮ ಹಾಕಿಕೊಳ್ಳಲು ಕಾರಣ, ಅಲ್ಲಿನ ಭೌಗೋಳಿಕ ಹಿನ್ನೆಲೆ, ಆ ನಿರ್ದಿಷ್ಟ ದೇವಾಲಯದ ಸ್ಥಳ ಪುರಾಣ, ಅಲ್ಲಿನ ಆಚರಣೆಗಳು ಎಲ್ಲವನ್ನೂ ಆಸ್ತಿಕನಾದವನು ಒಪ್ಪಿಯೇ ಒಪ್ಪುತ್ತಾನೆ ಮತ್ತು ಒಪ್ಪಲೇಬೇಕು. ಏಕೆಂದರೆ ದೇವರೆನ್ನುವುದೇ ನಂಬಿಕೆ ಎಂದ ಮೇಲೆ ನಂಬಿಕೆ ಬೇಡ, ಸೌಲಭ್ಯ ಬೇಕು ಎನ್ನುವುದು ಪಕ್ಕಾ ನಾಸ್ತಿಕತೆಯೇ ಸರಿ. ಅಂತಹಾ ನಾಸ್ತಿಕರ ಮುಂದಾಳತ್ವದಲ್ಲಿ ಹಿಂದೂಗಳ ನಂಬಿಕೆಯನ್ನು ಘಾಸಿಗೊಳಿಸುವ ಕೆಲಸ ಕೇರಳದಲ್ಲಿ ನಡೆದರೆ, ಅದೇ ಸಮಯದಲ್ಲಿ ಕರ್ನಾಟಕದಲ್ಲಿ ನಡೆಯುವ ಬಹುರೂಪಿ ನಾಟಕೋತ್ಸವಕ್ಕೆ ‘ಲಿಂಗ ಸಮಾನತೆ’ ಎನ್ನುವ ಶೀರ್ಷಿಕೆ ಕೊಟ್ಟು, ನಂಬಿಕೆಗಳ ವಿರುದ್ಧ ಹಕ್ಕು ಸ್ಥಾಪನೆಯ ಹುನ್ನಾರವನ್ನು ವಾರ ಪೂರ್ತಿಯೂ ಜಾರಿಯಲ್ಲಿರಿಸಿ ತಮ್ಮದೇ ಗುಂಪಿನ ವಾದಕ್ಕೆ ನೈತಿಕ ಬಲ ತುಂಬುವ ಕೆಲಸವನ್ನು ಮಾಡಲಾಯಿತು. ದೇವಾಲಯ ಮತ್ತು ದೇವರ ವಿಚಾರಗಳೇ ಪ್ರಮುಖವಾಗಿದ್ದರೂ, ಅಲ್ಲಿ ನಂಬಿಕೆಗಳ ಹಾಗೂ ನಂಬಿಕೆಗಳ ಆಧಾರಿತ ಆಚರಣೆ ಮತ್ತು ಸಂಪ್ರದಾಯಗಳ ಪರವಾಗಿ ಮಾತನಾಡುವವರಿಗೆ ಸಮಾನ ಅವಕಾಶ ಇರಲೇ ಇಲ್ಲ! ಇದನ್ನೇ ನಾನು ಏಕರೂಪಿ ಬಹುರೂಪಿ ಎಂದಿದ್ದು.
“ದೇವರನ್ನು ವೈದಿಕತೆಯಿಂದ ವೈಚಾರಿಕತೆಗೆ ಎಳೆದು ತಂದು ಶೂದ್ರ ಪರಂಪರೆ ಜತೆ ಕೂಡಿಸಬೇಕಿದೆ” ಎನ್ನುವುದೇ ಆ ಬಹುರೂಪಿ ಉದ್ಘಾಟಕರ ಮೊದಲ ವಾದವಾಗಿತ್ತು! ಇವರದೇ ಸಮಾನ ಮನಸ್ಕರ ಗುಂಪು ಬೇರೆ ಕಡೆಗಳಲ್ಲಿ ದೇವರೆನ್ನುವುದೇ ಶೂದ್ರರನ್ನು ಶೋಷಿಸಲು ಹರಿಯಬಿಟ್ಟ ಕಲ್ಪನೆ ಎನ್ನುವ ವಾದವನ್ನೂ ಮಾಡುತ್ತಾರೆ! ಹಾಗಾದರೆ ದೇವರ ಹೆಸರಿನಲ್ಲಿ ಶೋಷಣೆಯನ್ನು ಮತ್ತೆ ಏಕೆ ಶೂದ್ರರ ಮೇಲೆ ಹೇರಬೇಕು? ಅವರ ನಿಜವಾದ ಉದ್ದೇಶ ಅದಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲೆಲ್ಲಿ ಹೇಗೆಲ್ಲಾ ದೇಶವನ್ನು, ದೇಶದ ಸಂಸ್ಕೃತಿಯನ್ನು ಒಡೆಯಬಹುದೋ ಅದೆಲ್ಲವನ್ನೂ ಮಾಡುವುದಷ್ಟೇ ಅವರ ನಿಜವಾದ ಉದ್ದೇಶ. ತಮ್ಮವರೆನ್ನುವ ಕಾರಣಕ್ಕೆ ನಕ್ಸಲರ ಹಿಂಸೆಯನ್ನೂ ತಾತ್ವಿಕ ಹಿಂಸೆ ಎಂದು ಪ್ರತಿಪಾದಿಸುವವರದ್ದು ಇನ್ನೇನು ಉದ್ದೇಶವಿದ್ದೀತು? ಹೀಗೆ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಬೇಕು ಎಂದು ಬಯಸುವ ಮತ್ತು ತಮ್ಮ ವಾದವನ್ನು ಒಪ್ಪದ ಎಲ್ಲವನ್ನೂ/ಎಲ್ಲರನ್ನೂ ವಿರೋಧಿಸುವ ಏಕರೂಪಿ ಮನಃಸ್ಥಿತಿಯ ಗುಂಪೇ ಈಗ “ಏಕರೂಪಿ ಮನಃಸ್ಥಿತಿ ಹೊಂದಿರುವ ವ್ಯಕ್ತಿಯಿಂದ ಬಹುರೂಪಿ ನಡೆಯಲು ಸಾಧ್ಯವಿಲ್ಲ” ಎಂದು ಹೇಳುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ.

ಈಗ ಇನ್ನೂ ಒಂದು ವರ್ಷ ಹಿಂದಕ್ಕೆ ಹೋಗಿ ನೋಡೋಣ;

2018 ರ ಬಹುರೂಪಿ ನಾಟಕೋತ್ಸವ ಮತ್ತದರ ವಿಚಾರಸಂಕಿರಣದಲ್ಲಿ ನಿಗದಿಪಡಿಸಲಾದ ಶೀರ್ಷಿಕೆ ‘ವಲಸೆ’. ಅರೆ! ಅದರಲ್ಲೇನು ವಿಶೇಷ ಎನ್ನುತ್ತೀರಾ? ಯಾವುದೇ ರೀತಿಯಲ್ಲಾದರೂ ಭಾರತವನ್ನು ದುರ್ಬಲಗೊಳಿಸಬೇಕೆನ್ನುವ ಏಕರೂಪಿ ಮನಃಸ್ಥಿತಿಯ ಅಲ್ಪಸಂಖ್ಯಾತ ಗುಂಪೊಂದರ ಬುದ್ಧಿವಂತಿಕೆ ಅಡಗಿರುವುದೇ ಇಲ್ಲಿ. ಹೇಗೆ ಕಳೆದ ವರ್ಷ ಮಹಿಳೆಯರಿಗೆ ಪ್ರವೇಶವಿಲ್ಲದ ‘ಏಕೈಕ’ ಅಯ್ಯಪ್ಪ ದೇವಾಲಯದ ಒಳಗೆ ನಾಸ್ತಿಕ ಮಹಿಳೆಯರು ನುಗ್ಗುವ ಸಮಯದಲ್ಲೇ ಬಹುರೂಪಿ ನಾಟಕೋತ್ಸವಕ್ಕೆ ‘ಲಿಂಗ ಸಮಾನತೆ’ ಎನ್ನುವ ಶೀರ್ಷಿಕೆ ಕೊಡಲಾಗಿತ್ತೋ, ಹಾಗೆಯೇ ಅದರ ಹಿಂದಿನ ವರ್ಷದಲ್ಲಿ ರೋಹಿಂಗ್ಯಾಗಳು ಭಾರತದೊಳಕ್ಕೆ ವ್ಯಾಪಕವಾಗಿ ಅಕ್ರಮವಾಗಿ ನುಸುಳಿ ಬರುತ್ತಿದ್ದರು. ದಕ್ಷಿಣ ಭಾರತವೂ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲಿ ಅಕ್ರಮವಾಗಿ ನುಗ್ಗಿ ನೆಲೆಸತೊಡಗಿದ್ದರು. ಯಾವುದೇ ಗುರುತು ಪತ್ರವಿಲ್ಲದೆ ಅಕ್ರಮವಾಗಿ ನುಸುಳಿ ಬರುತ್ತಿರುವ ರೋಹಿಂಗ್ಯಾಗಳಿಂದಾಗಿ ಭಾರತದ ಭದ್ರತೆಗೆ ಅಪಾಯವಿದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಆತಂಕ ವ್ಯಕ್ತಪಡಿಸಿತ್ತು. ಸದಾ ದೇಶದ ಅಭದ್ರತೆಯನ್ನೇ ಬಯಸುವ ಆ ಏಕರೂಪಿ ಮನಃಸ್ಥಿತಿಯ ಅಲ್ಪಸಂಖ್ಯಾತ ಗುಂಪಿಗೆ ಬೇಕಾಗಿದ್ದೂ ಅದೇ! ಗಡಿಗಳನ್ನು ಮೀರಿದ ಸಂಬಂಧ, ಮಾನವ ಹಕ್ಕು, ಎಲ್ಲರ ರಕ್ತವೂ ಕೆಂಪು ಎನ್ನುತ್ತಾ ಅಕ್ರಮ ನುಸುಳುಕೋರರ ಬೆಂಬಲಕ್ಕೆ ನಿಂತಿದ್ದ ಆ ಗುಂಪು, ಭಾರತದೊಳಕ್ಕೆ ನುಗ್ಗುತ್ತಿದ್ದ ಅಕ್ರಮ ನುಸುಳುಕೋರರನ್ನು ಸಮರ್ಥಿಸಿಕೊಳ್ಳಲು ಮತ್ತು ಅವರಿಗೆ ನೈತಿಕ ಬೆಂಬಲ ನೀಡುವ ಕಾರಣಕ್ಕಾಗಿಯೇ ಕರ್ನಾಟಕ ಸರ್ಕಾರದ ಹಣದಲ್ಲಿ ಆ ಬಹುರೂಪಿಗೆ ‘ವಲಸೆ’ ಎನ್ನುವ ಶೀರ್ಷಿಕೆ ನೀಡಿ, ಅವರೆಡೆಗೆ ಅನುಕಂಪ ಮೂಡಿಸಿತು.ವಲಸೆ ಎನ್ನುವ ವಿಷಯವನ್ನಿಟ್ಟುಕೊಂಡು ಕಪ್ಪು ಹಣ ನಿಯಂತ್ರಿಸಲೆಂದೇ ಜಾರಿಗೆ ತಂದ ನೋಟ್ ಬ್ಯಾನ್ ಅನ್ನೂ ಕೂಡಾ ಅಲ್ಲಿ ವಿರೋಧಿಸಲಾಯಿತು.

ವಲಸೆ ಎನ್ನುವ ವಿಷಯವನ್ನಿಟ್ಟುಕೊಂಡು ಕಣಿ ಹೇಳುವ ಮತ್ತು ಎತ್ತುಗಳೊಂದಿಗೆ ತಮ್ಮ ಪಾರಂಪರಿಕ ಸಂಪ್ರದಾಯಗಳನ್ನು ತೋರಿಸಿದ ಬುಡುಬುಡಿಕೆ ಹೇಳುವ ನಮ್ಮ ದೇಶದ ಸಂಸ್ಕೃತಿಯನ್ನೂ ಟೀಕಿಸಲಾಯಿತು. ಆ ಮೂಲಕ ಪರೋಕ್ಷವಾಗಿ ಗೋ ಹತ್ಯೆ ಮತ್ತು ಗೋ ಕಳ್ಳತನದ ಪರ ನೈತಿಕ ಬೆಂಬಲವನ್ನೂ ಸೂಚಿಸಲಾಯಿತು. ಆದರೆ ಅಲ್ಲಿ ಕೇವಲ ಆ ಗುಂಪಿನ, ಆ ರೀತಿಯ ಏಕರೂಪಿ ಚರ್ಚೆಗಳಿಗೆ ಪ್ರಾಧಾನ್ಯತೆ ದೊರೆಯಿತೇ ಹೊರತೂ ದೇಶದ ಭದ್ರತೆ, ಆಂತರಿಕ ಕಾನೂನು, ಅಕ್ರಮ ವಲಸಿಗರಿಂದ ಸಾಮಾನ್ಯ ನಾಗರಿಕರಿಗಾಗುವ ತೊಂದರೆಗಳ ಬಗ್ಗೆ, ನೋಟು ನಿಷೇಧದಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ, ಗೋ ಹತ್ಯೆಯ ನಿಷೇಧದ ಪರವಾಗಿ ಮಾತನಾಡಬಲ್ಲ ವಿಷಯ ತಜ್ಞರುಗಳಿಗೆ ಸಮಾನ ಅವಕಾಶ ಖಂಡಿತವಾಗಿಯೂ ಇರಲಿಲ್ಲ! ಇದನ್ನೇ ನಾನು ಏಕರೂಪಿ ಬಹುರೂಪಿ ಎಂದಿದ್ದು.

ಆದರೆ ಈ ವರ್ಷದ ಬಹುರೂಪಿ ನಿಜವಾಗಿಯೂ ಬಹುರೂಪಿಯಾಗಿ ಬದಲಾದಂತಿದೆ. ಟಿಪ್ಪುವಿನಿಂದ ತಮ್ಮ ಪ್ರದೇಶ, ತಮ್ಮ ಜನಾಂಗ ಮತ್ತು ತಮ್ಮ ಕುಟುಂಬ ಅನುಭವಿಸಿದ ನೋವನ್ನು ರಂಗಾಯಣದ ಹೊರಗೂ ಮತ್ತು ಎಲ್ಲೆಲ್ಲಿಯೂ ವ್ಯಕ್ತಪಡಿಸಲೇಬಾರದು ಎನ್ನುವ ಏಕರೂಪಿ ಮನಃಸ್ಥಿತಿಯ ಜನರಿಗೂ ‘ಗಾಂಧಿ ಪಥ’ ದಲ್ಲಿ ಯಾವ ಅವಕಾಶವನ್ನೂ ನಿರಾಕರಿಸಲಾಗಿಲ್ಲ. ಗಾಂಧಿಯವರ ಚಿಂತನೆಗೆ ಸಂಪೂರ್ಣ ತದ್ವಿರುದ್ಧವಾಗಿರುವ ಮಾರ್ಕ್ಸ್ ವಾದಿಗಳಿಗೂ ವೇದಿಕೆಯ ಮೇಲೆಯೇ ಗಾಂಧಿಯ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿದೆ. ಕುಡಿಯುವುದು ನನ್ನ ವೈಯುಕ್ತಿಕ ವಿಚಾರ  ಮತ್ತು ಆ ವಿಚಾರದಲ್ಲಿ ಯಾರೂ ತಲೆ ಹಾಕಬೇಕಾಗಿಲ್ಲ ಎನ್ನುವವರಿಗೂ ‘ಕುಡಿತದಿಂದ ಸರ್ವನಾಶ’ ಎಂದಿದ್ದ ಗಾಂಧಿ ಪಥದಲ್ಲಿ ಮುಕ್ತ ಅವಕಾಶ ಒದಗಿಸಲಾಗಿದೆ.
ಒಟ್ಟಿನಲ್ಲಿ ರಂಗಾಯಣವೀಗ ಏಕರೂಪಿಯಿಂದ ಬಹುರೂಪಿಯೆಡೆಗೆ ನೈಜ ಪಯಣ ಆರಂಭಿಸಿದೆ.ಇದಕ್ಕಾಗಿ ರಂಗಾಯಣಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.

-ಪ್ರವೀಣ್ ಕುಮಾರ್ ಮಾವಿನಕಾಡು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss