ಹೊಸ ದಿಗಂತ ವರದಿ, ಕಾಸರಗೋಡು:
ಕೇರಳ ರಾಜ್ಯ ವಿಧಾನಸಭಾ ಚುನಾವಣೆಯನ್ನು ಅವಧಿಗೆ ಮುಂಚಿತವಾಗಿ ಅಂದರೆ ಮೇ ತಿಂಗಳಿನ ಬದಲಿಗೆ ಏಪ್ರಿಲ್ ತಿಂಗಳಲ್ಲಿಯೇ ನಡೆಸುವ ಸಾಧ್ಯತೆಯಿದೆ. ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಪರೀಕ್ಷೆಯ ಮೊದಲು ಚುನಾವಣೆ ಪೂರ್ತಿಗೊಳಿಸುವ ಚಿಂತನೆ ನಡೆಸಲಾಗುತ್ತಿದೆ.
ಮೇ ದ್ವಿತೀಯ ವಾರದೊಳಗೆ ಎರಡು ಹಂತಗಳಲ್ಲಾಗಿ ಚುನಾವಣೆ ನಡೆಸಲು ಈ ಹಿಂದೆ ಯೋಚಿಸಲಾಗಿತ್ತು. ಆದರೆ ಇದೀಗ ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಪರೀಕ್ಷೆಗಳ ದಿನಾಂಕಗಳನ್ನು ಘೋಷಿಸಲಾಗಿದೆ. ಮೇ 14ರಿಂದ ಜೂನ್ 10ರ ವರೆಗೆ 10 ಹಾಗೂ 12ನೇ ತರಗತಿಗಳ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೂ ಮುಂಚಿತವಾಗಿ ಚುನಾವಣೆ ನಡೆಸಬೇಕಾಗಿ ಬರಲಿದೆ. ಇದೇ ವೇಳೆ ಕೇರಳ ಎಸ್ಎಸ್ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ನಡೆಯಲಿವೆ.
2016ರಲ್ಲಿ ಮೇ 16ರಂದು ವಿಧಾನಸಭಾ ಚುನಾವಣೆ ನಡೆದಿತ್ತು. ಮೇ 19ರಂದು ಮತಎಣಿಕೆ ಹಾಗೂ ಮೇ 25 ರಂದು ಈಗಿನ ಎಡರಂಗ ಸರಕಾರವು ಅಧಿಕಾರಕ್ಕೆ ಏರಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆ ಬಗ್ಗೆ ಮುಂದಿನ ವಾರ ಆಗಮಿಸುವ ಕೇಂದ್ರ ಚುನಾವಣಾ ಆಯೋಗದ ಪ್ರತಿನಿಧಿಗಳು ಸಮಗ್ರ ಚರ್ಚೆ ನಡೆಸಲಿದ್ದಾರೆ