Thursday, July 7, 2022

Latest Posts

ಏರೋ ಇಂಡಿಯಾ-2021 ಸಂಪನ್ನ: 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಸಹಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಯಲಹಂಕ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ 2021 ರಲ್ಲಿ ಕರ್ನಾಟಕ, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಿದೆ.
ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್‌, ಏರೋಸ್ಪೇಸ್‌ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದರು.

ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳಿಗೆ ರಾಜ್ಯದಲ್ಲಿ ಈಗಾಗಲೇ ಪೂರಕ ಪರಿಸರ ವ್ಯವಸ್ಥೆ ಇದ್ದು, ಈ ಕೈಗಾರಿಕಾ ವಲಯಗಳಲ್ಲಿ ಅಗತ್ಯ ಭೂಮಿಯೂ ಲಭ್ಯವಿದೆ. ನೂತನ ಕೈಗಾರಿಕಾ ನೀತಿ 2020-25 ಅಡಿ ಹೂಡಿಕೆದಾರರಿಗೆ ಅನುಕೂಲಕರ ಅರ್ಥ ವ್ಯವಸ್ಥೆ ರೂಪಿಸಲು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅಗತ್ಯ ಕೌಶಲ ಹೊಂದಿರುವ ಕಾರ್ಮಿಕ ಕಾರ್ಯಪಡೆಯ ಲಭ್ಯತೆ ಜತೆಗೆ, ಕಾರ್ಮಿಕ ಕಾನೂನಿಲ್ಲೂ ಸುಧಾರಣೆ ತರಲಾಗಿದೆ. ಉತ್ತಮ ಸಂಪರ್ಕ ಹಾಗೂ ಲಾಜಿಸ್ಟಿಕ್‌ ವ್ಯವಸ್ಥೆ ಇದ್ದು, ಸುಲಲಿತ ವ್ಯವಹಾರಕ್ಕೆ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಏರೋಸ್ಪೇಸ್‌ಗೆ ಸಂಬಂಧಿಸಿದ ದೇಶದ ಒಟ್ಟು ರಫ್ತಿನಲ್ಲಿ ನಮ್ಮ ಪಾಲು ಶೇ. 65 ರಷ್ಟು. ಏರ್‌ಕ್ರಾಫ್ಟ್‌, ಬಾಹ್ಯಾಕೇಶಕ್ಕೆ ಸಂಬಂಧಿಸಿದ ಶೇ.25 ರಷ್ಟು ಉದ್ಯಮಗಳು ನಮ್ಮಲ್ಲಿವೆ. ರಕ್ಷಣಾ ಸೇವೆಗೆ ಬಳಕೆಯಾಗುವ ಶೇ.67 ರಷ್ಟು ಏರ್‌ಕ್ರಾಫ್ಟ್‌ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತದೆ. ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪೂರಕ ಪರಿಸರ ವ್ಯವಸ್ಥೆ ನಮ್ಮಲ್ಲಿದ್ದು, ಈ ನೂತನ ಒಪ್ಪಂದಗಳ ಮುಂದಿನ ಗುರಿ ಸಾಧನೆಗೆ ನೆರವಾಗಲಿವೆ ಎಂದು ತಿಳಿಸಿದ್ದಾರೆ.

ಪ್ರಮುಖ ಒಪ್ಪಂದಗಳು
ಅಭ್ಯುದಯ ಭಾರತ್ ಮೆಗಾ ಡಿಫೆನ್ಸ್‌ ಕ್ಲಸ್ಟರ್‌ 1000 ಕೋಟಿ ರೂ . ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಗೋಪಾಲನ್‌ ಏರೋಸ್ಪೇಸ್‌ ಇಂಡಿಯಾ ಪ್ರೈ ಲಿ. 438, ಆಲ್ಫಾ ಡಿಸೈನ್‌ ಟೆಕ್ನಾಲಜಿಸ್‌ ಹಾಗೂ ಟೆಸ್‌ಬೆಲ್‌ ತಲಾ 250 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ರಕ್ಷಣಾ ಉದ್ಯಮದ ನೆಲೆ
ಏರೋಸ್ಪೇಸ್‌ ಮತ್ತು ಡಿಫೆನ್ಸ್ ಕ್ಷೇತ್ರದ ಸಾರ್ವಜನಿಕ ಉದ್ದಿಮೆಗಳಾದ ಹೆಚ್‌ಎಎಲ್‌, ಬಿಹೆಚ್‌ಇಎಲ್‌, ಭಾರತ್‌ ಎಲೆಕ್ಟ್ರಾನಿಕ್ಸ್‌ ನಮ್ಮ ಹೆಮ್ಮೆಯಾಗಿದೆ. ಇದರ ಜತೆಗೆ ದೇಶದ ಉನ್ನತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಡಿಆರ್‌ಡಿಒ, ಇಸ್ರೋ ಇತ್ಯಾದಿಗಳನ್ನು ಹೊಂದಿರುವ ಏಕೈಕ ರಾಜ್ಯ ಕರ್ನಾಟಕ. ದೇಶದ ಏರೋಸ್ಪೇಸ್‌ ಮತ್ತು ರಕ್ಷಣಾ ಉದ್ಯಮದ ಶೇ.70 ರಷ್ಟು ಪೂರೈಕೆದಾರರಿಗೆ ಕರ್ನಾಟಕ ನೆಲೆಯಾಗಿದೆ.
ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss