ಹೊಸ ದಿಗಂತ ವರದಿ, ಮೈಸೂರು:
ಜಮೀನು ನೀಡಿದ ರೈತ ಕುಟುಂಬಕ್ಕೆ ಉದ್ಯೋಗ ನೀಡದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆಯ ಆಡಳಿತ ಮಂಡಳಿಯ ಧೋರಣೆಯ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು, ಸೋಮವಾರ ಬೆಳಗ್ಗೆ ಕಾರ್ಖಾನೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರು, ನಮ್ಮ ಭೂಮಿ ನಮಗೆ ವಾಪಸ್ ಕೊಡಿ ಎಂದು ಕಳೆದ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಬೇಡಿಕೆಗೆ ಕಾರ್ಖಾನೆಯ ಆಡಳಿತ ಮಂಡಳಿಯವರು ಇದುವರೆಗೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಗೇಟ್ ಬಂದ್ ಮಾಡಿ, ಅದರ ಮುಂಭಾಗ ಮಣ್ಣು ಸುರಿದು ಮುಳ್ಳಿನ ಬೇಲಿಯನ್ನು ಹಾಕಿದ್ದಾರೆ. ಅಲ್ಲದೇ, ಸುತ್ತಮುತ್ತ ದನಕರುಗಳನ್ನು ಕಟ್ಟಿಹಾಕಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಗೆ ಭೂಮಿ ನೀಡಿದ 95 ರೈತ ಕುಟುಂಬದವರಿಗೆ ಕಾಯಂ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಅವರಿಗೆ ನೇಮಕಾತಿ ಪತ್ರ ನೀಡಿಲ್ಲ. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ.