ಹೊಸ ದಿಗಂತ ವರದಿ ಮೈಸೂರು:
ಭೂಮಿ ನೀಡಿದ ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡದ ನಂಜನಗೂಡು ತಾಲೂಕಿನಲ್ಲಿರುವ ಏಷ್ಯನ್ ಪೈಂಟ್ಸ್ ಕಾರ್ಖಾನೆ ಆಡಳಿತ ಮಂಡಳಿಯ ಧೋರಣೆಯ ವಿರುದ್ಧ ಕೆರಳಿರುವ ಹಿಮ್ಮಾವು ಗ್ರಾಮಸ್ಥರು ಗ್ರಾಮಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಏಷ್ಯನ್ ಪೈಂಟ್ಸ್ ಕಾರ್ಖಾನೆಗೆ ಜಮೀನು ನೀಡಿರುವ ರೈತರ ಕುಟುಂಬಕ್ಕೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವುದಾಗಿ ಆಡಳಿತ ಮಂಡಳಿಯವರು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ, ಹೀಗಾಗಿ ಕಳೆದ 40 ದಿನಗಳಿಂದ ಕಾರ್ಖಾನೆಯ ಮುಂದೆ ಗ್ರಾಮಸ್ಥರು, ಜಮೀನು ನೀಡಿರುವ ರೈತರು ಪ್ರತಿಭಟನಾ ಧರಣಿಯನ್ನು ನಡೆಸುತ್ತಿದ್ದಾರೆ. ಹೀಗಿದ್ದರೂ ಕೂಡ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತವಾಗಲೀ, ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರಾಗಲೀ ಯಾವುದೇ ಗಂಭೀರವಾದ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಂಡಿಲ್ಲ, ಈ ಹಿನ್ನಲೆಯಲ್ಲಿ ಕೆರಳಿರುವ ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರು ಗ್ರಾಮಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಆ ಮೂಲಕ ಜಿಲ್ಲಾಡಳಿತಕ್ಕೆ, ಶಾಸಕರಿಗೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ಇದರಿಂದಾಗಿ ಮತದಾನ ನಡೆಯಬೇಕಿದ್ದ ಶಾಲೆಗೆ ಬೀಗ ಹಾಕಲಾಗಿದ್ದು, ಅಧಿಕಾರಿಗಳು ಮತಗಟ್ಟೆಯನ್ನೂ ತೆರೆಯಲಿಲ್ಲ. ಪರಿಣಾಮವಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.