ಮೈಸೂರು: ಪೊಲೀಸ್ ಪೇದೆಯೊಬ್ಬರಿಂದ ಕೊರೋನಾ ಸೋಂಕು ಹರಡುವ ಆತಂಕ ಇದೀಗ ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಗಿದೆ. ಸೋಂಕಿತ ಪೇದೆಯ ಸಂಪರ್ಕಕ್ಕೆ ಬಂದಿದ್ದ ಐಜಿಪಿ ವಿಫುಲ್ಕುಮಾರ್, ಎಸ್ಪಿ ರಿಷ್ಯಂತ್ ಅವರ ಪರೀಕ್ಷಾ ವರದಿ ನೆಗಟಿವ್ ಬಂದಿದ್ದು, ಪೊಲೀಸ್ ಅಧಿಕಾರಿಗಳು ಇದೀಗ ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ೫೦ ಸಜೀವ ಗುಂಡುಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದಲ್ಲಿದ್ದ ಪೊಲೀಸ್ ಪೇದೆಯೊಬ್ಬರಿಗೆ ಕೊರೋನಾ ವೈರಾಣು ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು. ಈತನ ಸಂಪರ್ಕಕ್ಕೆ ಎಸ್ಪಿ, ಎಎಸ್ಪಿ, ಐಜಿಪಿ ಕೂಡ ಬಂದಿದ್ದ ಕಾರಣ, ಈ ಅಧಿಕಾರಿಗಳನ್ನೆಲ್ಲಾ ಹೋಂ ಕ್ವಾರಂಟೈನ್ಗೆ ಒಳಪಡಿಸಿ, ಅವರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಅಧಿಕಾರಿಗಳ ವರದಿ ನೆಗಟಿವ್ ಬಂದಿದೆ.