Saturday, January 23, 2021

Latest Posts

ಐತಿಹಾಸಿಕ ಪುರುಷರ ಸ್ಥಳ ಅಭಿವೃದ್ಧಿಗೆ 1ಕೋಟಿ ವೆಚ್ಚ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ನಗರದಲ್ಲಿರುವ ವಿವಿಧ ಐತಿಹಾಸಿಕ ಪುರುಷರ ಪ್ರತಿಮೆಗಳ ಸ್ಥಳದ ಅಭಿವೃದ್ಧಿಗೆ ಸುಮಾರು ೧ ಕೋಟಿಗೂ ಹೆಚ್ಚು ಹಣ ವ್ಯಯ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನಗರದಲ್ಲಿರುವ ಮದಕರಿ ನಾಯಕ, ಒನಕೆ ಓಬವ್ವ, ಅಂಬೇಡ್ಕರ್, ಕನಕದಾಸರ ಪ್ರತಿಮೆಗಳ ಬಳಿ ನೀರಿನ ಕಾರಂಜಿ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಇದು ಪ್ರತಿಮೆಗಳಿಗೆ ಶೋಭೆ ತರುವುದಲ್ಲದೇ ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರು.
ಮಹರ್ಷಿ ವಾಲ್ಮೀಕಿ ಅವರು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಹತ್ತಿರವಾಗುವಂತಹ ರಾಮಾಯಣ ಕೃತಿ ರಚಿಸಿದ್ದಾರೆ. ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿತು. ನಾಯಕ ಸಮಾಜದಲ್ಲಿ ವೀರ ಮದಕರಿ ನಾಯಕ ಅನೇಕ ವೀರ ಪುರುಷರು ನಾಡಿನಾದ್ಯಂತ ಉತ್ತಮ ಆಡಳಿತ ನಡೆಸಿದ್ದಾರೆ. ಪ್ರತಿಯೊಬ್ಬರೂ ಇವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಎಸ್.ಟಿ. ಮೋರ್ಚ ರಾಜ್ಯ ಉಪಾಧ್ಯಕ್ಷ ಹರ್ತಿಕೋಟೆ ವೀರೇಂದ್ರಸಿಂಹ ಮಾತನಾಡಿ, ಜೀವನದಲ್ಲಿ ಹಿಂಸಾ ಮಾರ್ಗ ತ್ಯಜಿಸಿ, ಅಹಿಂಸಾ ಮಾರ್ಗದಲ್ಲಿ ಸಾಗಿದ ವಾಲ್ಮೀಕಿ ಮಹರ್ಷಿ ರಾಮಾಯಣ ರಚಿಸಿದರು. ವಾಲ್ಮೀಕಿ ಜಯಂತಿಯನ್ನು ಕಾರ್ಯಕ್ರಮ ಸಮಾಜದ ಸಂಘಟನೆಗೆ ಅನುಕೂಲ ಮಾಡಿಕೊಟ್ಟಿದೆ. ವಾಲ್ಮೀಕಿ ಕಾಡಿನಲ್ಲಿ ಬೇಟೆ ಆಡುವುದನ್ನು ಬಿಟ್ಟು ಅಕ್ಷರ ಬೇಟೆಗೆ ಮುಂದಾದರು. ಅದರಂತೆ ನಾಯಕ ಸಮಾಜ ಅಳಿಸಲಾಗದ ಸಂಪತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಳೆದ ಕೆಲವು ವರ್ಷಗಳಿಂದ ಮೀಸಲಾತಿ ಹೋರಾಟ ನಡೆಯುತ್ತಿದೆ. ಬಹುತೇಕ ಎಲ್ಲ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷವಯ ವಹಿಸಿದ್ದವು. ಈಗಿನ ಬಿಜೆಪಿ ಸರ್ಕಾರ ಒಂದು ತಾತ್ವಿಕ ನೆಲೆಗಟ್ಟಿಗೆ ತಂದಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಬಂದು ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ದಾರೆ. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಆದಷ್ಟು ಬೇಗ ಅದನ್ನು ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು.
ಎಸ್.ಟಿ. ಮೋರ್ಚ ಜಿಲ್ಲಾಧ್ಯಕ್ಷ ಪಿ.ಬೋರನಾಯಕ ಮಾತನಾಡಿ, ಸಾಮಾನ್ಯ ಬೇಟೆಗಾರರಾಗಿದ್ದ ವಾಲ್ಮೀಕಿಯವರು ರಾಮ ಬಲದಿಂದ ಸಂಸ್ಕಾರ ಪಡೆದು ರಾಮಾಯಣ ರಚಿಸಿದ್ದಾರೆ. ಇಡೀ ವಿಶ್ವಕ್ಕೆ ಶ್ರೇಷ್ಠ ಸಂದೇಶ ನೀಡಿದ್ದಾರೆ. ಆ ಮೂಲಕ ವಾಲ್ಮೀಕಿ ಮಹರ್ಷಿ ದೈವತ್ವಕ್ಕೆ ಏರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರಥಮ ಬಾರಿಗೆ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಿದೆ. ಹಾಗಾಗಿ ನಾಯಕ ಸಮಾಜ ಋಣಿಯಾಗಿರಬೇಕಾಗುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದ್ರಿನಾಥ್, ಸದಸ್ಯೆ ಎ.ರೇಖಾ, ಪ್ರವಾಸೋದ್ಯಮ ಇಲಾಖೆ ನಾಮ ನಿರ್ದೇಶನ ನಿರ್ದೇಶಕ ನಾಗರಾಜ್ ಬೇದ್ರೆ ಅವರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುದ್ಲಾಪುರದ ಓಬಳೇಶ್ ಸೇರಿದಂತೆ ಎಸ್.ಟಿ. ಮೋರ್ಚಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಫೋಟೋ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!