Monday, August 8, 2022

Latest Posts

ಐದು ತಿಂಗಳ ಬಳಿಕ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾಂತ್ರಿಕ ದೋಣಿಗಳ ಮೀನುಗಾರಿಕಾ ಚಟುವಟಿಕೆ ಶುರು

ಉಡುಪಿ: ಬರೋಬ್ಬರಿ ಐದು ತಿಂಗಳ ಬಳಿಕ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾಂತ್ರಿಕ ದೋಣಿಗಳ ಮೀನುಗಾರಿಕಾ ಚಟುವಟಿಕೆ ಆರಂಭಗೊಂಡಿದೆ. ಕಳೆದ 3-4 ದಿನಗಳಿಂದ ಆಳಸಮುದ್ರ ಮೀನುಗಾರಿಕಾ ದೋಣಿಗಳು ಮೀನುಗಾರಿಕೆಗೆ ತೆರಳುತ್ತಿವೆ.
ಜಗತ್ತಿನಾದ್ಯಂತ ಕೋವಿಡ್-19 ಸೋಂಕು ಆವರಿಸಿಕೊಂಡು, ಉಡುಪಿ ಜಿಲ್ಲೆಯಲ್ಲಿಯೂ ಪತ್ತೆಯಾದಾಗ ಮಾರ್ಚ್ ತಿಂಗಳಾಂತ್ಯದಲ್ಲಿ ಮೀನುಗಾರಿಕಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಲಾಕ್‌ಡೌನ್ ಮುಗಿದು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ 15 ದಿನಗಳ ಕಾಲ ಮೀನುಗಾರಿಕಾ ಅವಧಿ ವಿಸ್ತರಿಸಿದರೂ ಮೀನುಗಾರಿಕೆ ಮಾತ್ರ ನಡೆದಿರಲಿಲ್ಲ. ನಿರಾಸೆಯಲ್ಲಿಯೇ ಮೀನುಗಾರಿಕಾ ಋತು ಅಂತ್ಯವಾಗಿ, ಹೊಸ ಋತು ಆರಂಭವಾದರೂ ಕಡಲ ಮಕ್ಕಳು ಮೀನುಗಾರಿಕೆಗೆ ತೆರಳಿರಲಿಲ್ಲ.
ಸಮುದ್ರ ಪೂಜೆ ನಡೆದರೂ ಜಿಲ್ಲಾಡಳಿತ ಮೀನುಗಾರಿಕಾ ಚಟುವಟಿಕೆಗಳಿಗೆ ಸಮರ್ಪಕ ನಿರ್ದೇಶನ ನೀಡಬೇಕೆಂದು ಮೀನುಗಾರರೆಲ್ಲರೂ ಕಾದಿದ್ದರು. ಇದೀಗ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆಯ ಸೂಕ್ತ ಸೂಚನೆಯನ್ನು ಪಡೆದುಕೊಂಡು ಮೀನುಗಾರಿಕೆ ಆರಂಭವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಿಧಾನವಾಗಿ ಚಟುವಟಿಕೆ ಆರಂಭವಾಗಿದೆ.
ಕಡಲಿಗಿಳಿದ ಸುಮಾರು 200 ಬೋಟುಗಳು
ಆ. 21ರಿಂದಲೇ ಆಳಸಮುದ್ರ ಮೀನುಗಾರಿಕೆ ದೋಣಿಗಳು ಕಡಲಿಗಿಳಿಯಲು ಆರಂಭಿಸಿವೆ. ಈಗಾಗಲೇ ಸುಮಾರು 150-200 ಬೋಟುಗಳು ಮೀನುಗಾರಿಕೆಗೆ ತೆರಳಿವೆ. ಇನ್ನೂ ಒಂದು ವಾರದ ನಂತರ ಮೀನುಗಾರಿಕೆ ನಡೆಸಿ, ಬಂದರಿಗೆ ಮರಳಲಿವೆ. ಅಲ್ಲದೇ ಆ. 26ರಿಂದ ಸಣ್ಣ ಟ್ರಾಲ್ ದೋಣಿಗಳು ಹಾಗೂ 30ರಿಂದ ಪರ್ಸಿನ್ ದೋಣಿಗಳು ಮೀನುಗಾರಿಕೆಗೆ ಇಳಿಯಲು ಆಯಾ ದೋಣಿ ಮಾಲಕರ ಸಂಘಗಳು ನಿರ್ಧರಿಸಿವೆ.
ಪಾಳಿಯಲ್ಲಿ ಹೆಚ್ಚು ದೋಣಿಗಳಿಗೆ ಅವಕಾಶ!
ಮೀನುಗಾರಿಕೆ ನಡೆಸಲು ಯಾವುದೇ ನಿರ್ಬಂಧವಿಲ್ಲದೇ ಇದ್ದರೂ ಬಂದರಿನ ಚಟುವಟಿಕೆಗೆ ನಿರ್ಬಂಧವಿದೆ. ವೈಯಕ್ತಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳ ಬಳಕೆ, ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅವಶ್ಯ. ಆದ್ದರಿಂದ ಜಿಲ್ಲಾಡಳಿತ ದಿನಕ್ಕೆ 50 ದೋಣಿಗಳಿಗೆ ಸೀಮಿತಗೊಳಿಸಿ ಅನುಮತಿಸಿದೆ. ಆದರೆ ಬಂದರು ಪ್ರದೇಶ ವಿಸ್ತಾರವಾಗಿರುವುದರಿಂದ ಪಾಳಿಯ ಆಧಾರದಲ್ಲಿ ಹೆಚ್ಚಿನ ಸಂಖ್ಯೆಯ ದೋಣಿಗಳಿಗೆ ಅವಕಾಶ ನೀಡಲು ಮಲ್ಪೆ ಮೀನುಗಾರರ ಸಂಘ ಮನವಿ ಮಾಡಿ, ಮೀನುಗಾರಿಕಾ ಇಲಾಖೆಯ ಮೂಲಕ ಜಿಲ್ಲಾಡಳಿತಕ್ಕೂ ಮನವರಿಕೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ’ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ಬಂದರು ಪ್ರದೇಶದ ಪ್ರತಿದಿನ ಸ್ಯಾನಿಟೈಸ್
ಬಂದರಿನಲ್ಲಿ ದೋಣಿಗಳಿಂದ ಮೀನು ಖಾಲಿ ಮಾಡಿ, ಹರಾಜು ಪ್ರಕ್ರಿಯೆ ಮಾತ್ರ ನಡೆಯುತ್ತದೆ. ಅಲ್ಲಿ ಮಾರಾಟ ಮಾಡಲ್ಲ. ಗ್ರಾಹಕರಿಗೆ ಬಂದರು ಪ್ರವೇಶಕ್ಕೆ ಅವಕಾಶವಿಲ್ಲ. ಮೀನುಗಾರರ ಸಂಘ ಮತ್ತು ಸೊಸೈಟಿಯ ಸಹಭಾಗಿತ್ವದಲ್ಲಿ ಮುಂದಿನ 2-3 ತಿಂಗಳ ಕಾಲ ಪ್ರತಿದಿನ ರಾತ್ರಿ 9ಗಂಟೆಯ ನಂತರ ಬಂದರು ಪ್ರದೇಶವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 1800 ವಿವಿಧ ರೀತಿಯ ಮೀನುಗಾರಿಕಾ ದೋಣಿಗಳಿವೆ. ಸುಮಾರು 800ರಷ್ಟು ಆಳ ಸಮುದ್ರ ದೋಣಿಗಳಿವೆ, 370ದೋಣಿಗಳು 600, ಪರ್ಸಿನ್ ದೋಣಿಗಳು 130, ಸಣ್ಣ ಟ್ರಾಲ್ ದೋಣಿಗಳು 200ರಷ್ಟಿವೆ. ನೇರವಾಗಿ ಮೀನುಗಾರಿಕೆ ನಡೆಸುವವರೇ 18ಸಾವಿರ ಜನರಿದ್ದಾರೆ. ಉಳಿದಂತೆ 15 ಸಾವಿರ ಮಂದಿ ಕಾರ್ಮಿಕರು, ವ್ಯಾಪಾರಸ್ಥರು ಮಲ್ಪೆ ಮೀನುಗಾರಿಕಾ ಬಂದರನ್ನು ಆಶ್ರಯಿಸಿದ್ದಾರೆ. ಇದೀಗ ಮೀನುಗಾರಿಕಾ ಚಟುವಟಿಕೆ ಆರಂಭವಾಗುತ್ತಿರುವುದು ಉಡುಪಿ ಜಿಲ್ಲೆಯ ಪರಿಸ್ಥಿತಿ ಸುಧಾರಿಸಲಿದೆ ಎನ್ನುವ ಭರವಸೆಯಲ್ಲಿ ಎಲ್ಲರೂ ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss