ದುಬೈ: ಸನ್ರೈಸರ್ಸ್ ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಸೊಂಟದ ನೋವಿಗೆ ಒಳಗಾಗಿದ್ದು, 2020ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಭುವನೇಶ್ವರ್ ಕುಮಾರ್ ಸೊಂಟದ ಉಳುಕಿಗೆ ಒಳಗಾಗಿ ಮೈದಾನದಿಂದ ಹೊರನಡೆದಿದ್ದರು.
ಅವರು ಸಂಪೂರ್ಣ ಓವರ್ ಕೋಟಾವನ್ನೂ ಮುಗಿಸಿರಲಿಲ್ಲ. ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎಸ್ಆರ್ಹೆಚ್ ಮೂಲ, ಗಾಯದ ಕಾರಣ ವೇಗಿ ಶ್ರೀಮಂತ ಕ್ರಿಕೆಟ್ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಐಪಿಎಲ್ನಲ್ಲಿ 2 ಬಾರಿ ಪರ್ಪಲ್ ಕ್ಯಾಪ್ ಪಡೆದಿರುವ ಭುವಿಯಂತಹ ಬೌಲರ್ ಟೂರ್ನಿಯಿಂದ ಹೊರಬಿದ್ದಿರುವುದು ನಿಜಕ್ಕೂ ಹೈದರಾಬಾದ್ ತಂಡಕ್ಕೆ ತುಂಬಲಾರದ ನಷ್ಟವಾಗಿದೆ.
ಡೆಲ್ಲಿಗೆ ಆಘಾತ ಕೊಟ್ಟ ಅಮಿತ್ ಮಿಶ್ರಾ
ಡೆಲ್ಲಿ ತಂಡದ ಮಂಚೂಣಿ ಬೌಲರ್ ಅಮಿತ್ ಮಿಶ್ರಾ ಕೂಡ ಹೊರಬಿದ್ದಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಶ್ರಾ ಕೇವಲ 2 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು.
ಕೆಕೆಆರ್ ವಿರುದ್ಧ ಶನಿವಾರ ನಡೆದಿದ್ದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಚೆಂಡನ್ನು ತಡೆಯುವ ವೇಳೆ ಗಂಭೀರ ಗಾಯವಾಗಿತ್ತು.ಎಎನ್ಐ ಜೊತೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧಿಕಾರಿ ಮಾತನಾಡಿದ್ದು , ಅಮಿತ್ ಮಿಶ್ರಾ ಅವರಿಗೆ ಬೆರಳಿನ ನರಕ್ಕೆ ಪೆಟ್ಟು ಬಿದ್ದಿರುವುದು ಖಚಿತವಾಗಿದೆ ಎಂದಿದ್ದಾರೆ.ಮಿಶ್ರಾ ವೈದ್ಯಕೀಯ ವರದಿ ಬಂದಿದೆ. ಅದು ತಂಡಕ್ಕೆ ಕೆಟ್ಟ ಸುದ್ದಿಯಾಗಿದೆ. ಅವರು ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಅವರ ಅನುಪಸ್ಥಿತಿ ಖಂಡಿತ ಡೆಲ್ಲಿ ತಂಡಕ್ಕೆ ಕಾಡಲಿದೆ.