ನವದೆಹಲಿ: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೊಳಗಾದ ಮಾಜಿ ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೀಪಕ್ ಕೊಚ್ಚರ್ ಅವರನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ತಂಡವು ಮುಂಬೈಯಿಂದ ದೆಹಲಿಗೆ ಕರೆತಂದಿತ್ತು. ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ತನ್ನ ವಕೀಲ ವಿಜಯ್ ಅಗರ್ವಾಲ್ ಅವರನ್ನು ಖಾನ್ ಮಾರುಕಟ್ಟೆ ಪ್ರಧಾನ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ.
ವಿಡಿಯೋಕಾನ್ಗೆ ಐಸಿಐಸಿಐ ಬ್ಯಾಂಕ್ ನೀಡಿದ ಸಾಲಗಳಲ್ಲಿ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಸೆಪ್ಟೆಂಬರ್ 19 ರವರೆಗೆ ದೀಪಕ್ ಕೊಚ್ಚರ್ ಅವರನ್ನು ಇಡಿ ಕಸ್ಟಡಿಗೆ ಕಳುಹಿಸಿತ್ತು.