ಹೊಸದಿಗಂತ ಆನ್ ಲೈನ್ ಡೆಸ್ಕ್:
ಐಸಿಸಿ ಟಿ20 Ranking ಪ್ರಕಟವಾಗಿದ್ದು, ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್.ರಾಹುಲ್ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ.
ರಾಹುಲ್ ಬಳಿ ಸದ್ಯ 816 ಪಾಯಿಂಟ್ಗಳಿವೆ. ಬ್ಯಾಟ್ಸ್ಮನ್ಗಳ ವಿಭಾಗದಲ್ಲಿ ಇಂಗ್ಲೆಂಡ್ನ ಡೇವಿಡ್ ಮಲಾನ್ (915) ಮತ್ತು ಬಾಬರ್ ಆಜಂ (820) ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರು 697 ಪಾಯಿಂಟ್ಸ್ ಕಲೆಹಾಕಿದ್ದಾರೆ.
ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಟಿಮ್ ಸೀಫರ್ಟ್ 24 ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ ಒಂಬತ್ತನೇ ಸ್ಥಾನ ಹಾಗೂ ಬೌಲಿಂಗ್ ವಿಭಾಗದಲ್ಲಿ ಟಿಮ್ ಸೌಥಿ ಏಳನೇ ಸ್ಥಾನದಲ್ಲಿದ್ದಾರೆ.
ಟಿ20 ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದ ಕ್ರಮಾಂಕದಲ್ಲಿ ಅಫ್ಗಾನಿಸ್ತಾನ ಜೋಡಿ ಮೊದಲ ಸ್ಥಾನದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್, ಆಲ್ರೌಂಡರ್ಗಳಲ್ಲಿ ಮೊಹಮ್ಮದ್ ನಬಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ತಂಡಗಳ ಕ್ರಮಾಂಕದಲ್ಲಿ ಇಂಗ್ಲೆಂಡ್ (275 ಪಾಯಿಂಟ್ಸ್) ಮೊದಲ ಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯಾ (272) ಹಾಗೂ ಭಾರತ (268) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.