Saturday, August 20, 2022

Latest Posts

ಒಂದು ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ: ಸಚಿವ ಎಸ್.ಟಿ.ಸೋಮಶೇಖರ

ಹೊಸ ದಿಗಂತ ವರದಿ, ಹಾವೇರಿ:

ಒಂದು ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತು ನನಗೆ ಹೆಚ್ಚಿನ ಮಾಹಿತಿಯಿಲ್ಲ. ಮೂರು-ನಾಲ್ಕು ಬೈಕ್ ಇದ್ದವರಿಗೆ ರದ್ದು ಮಾಡಬಹುದು, ನಿಯಮಾನುಸಾರ ಕ್ರಮ ಎಂದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಹೆಲಿಪ್ಯಾಡ್‌ನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಹೊಂದಲು ಕೆಲವೊಂದು ನಿಯಮಗಳಿವೆ. ಅದನ್ನು ಉಲ್ಲಂಘಿಸಿದರೆ ಮಾತ್ರ ರದ್ದುಪಡಿಸಿರುವುದಾಗಿ ಸಚಿವ ಉಮೇಶ್ ಕತ್ತಿಯವರು ಹೇಳಿರಬಹುದು. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಒಂದು ಬೈಕ್ ಅಥವಾ ಟೀವಿ ಇದ್ದರೆ ರದ್ದು ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇದ್ದಂತೆ ಕಾಣುತ್ತಿಲ್ಲ. ಕೆಲವೊಂದು ಮನೆಗಳಲ್ಲಿ ೩-೪ ಬೈಕ್‌ಗಳನ್ನು ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗನುಸಾರವಾಗಿ ರದ್ದು ಮಾಡುವ ಬಗ್ಗೆ ಸಚಿವರು ಪ್ರಸ್ತಾಪ ಮಾಡಿರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಮಾರು 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಉಳಿಪೆಟ್ಟುಗಳು ಬಿದ್ದಿವೆ. ಈಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕದ ರಾಜಾಹುಲಿ ಎಂದೆನಿಸಿಕೊಂಡಿದ್ದಾರೆ ಎಂದರು.
ತಂದೆಯವರಂತೆ ಪುತ್ರರಾದ ವಿಜಯೇಂದ್ರ ಅವರಿಗೂ ಸಾಕಷ್ಟು ಉಳಿಪೆಟ್ಟುಗಳು ಬೀಳಲಿದ್ದು, ಸುಂದರ ಮೂರ್ತಿಯಾಗಿ ರೂಪುಗೊಳ್ಳಲಿದ್ದಿರಿ. ಮುಂದೆ ಯಡಿಯೂರಪ್ಪ ಅವರಂತೆ ರಾಜಾಹುಲಿಯಾಗಿ ಹೊರಹೊಮ್ಮಲಿ, ಕರ್ನಾಟಕದಲ್ಲಿ ಸೇವೆ ಮಾಡಲಿ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರೈಸಿದ್ದಾಗಿ ಪತ್ರಕರ್ತರ ಪ್ರಶ್ನೆಗೆ ಸಚಿವ ಸೋಮಶೇಖರ್ ಉತ್ತರಿಸಿದರು.
ಪೆಟ್ರೋಲ್ ದರ ಏರಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಲಾಕ್ಡೌನ್ ಸಂದರ್ಭ ಇದ್ದ ಕಾರಣ, ಈಗ ಕೆಲವೊಂದು ಸೆಸ್ ಗಳನ್ನು ಹಾಕಿದ್ದಾರಷ್ಟೇ. ಪೆಟ್ರೋಲ್ ದರ ಏರಿಳಿತ ಆಗುತ್ತಲೇ ಇರುತ್ತದೆ. ಇದಕ್ಕೆ ಒಮ್ಮೊಮ್ಮೆ ಸಹಕಾರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ಹಂಸಭಾವಿಯಲ್ಲಿ ಸಹಕಾರ ಸಂಘದ ಶತಮಾನೋತ್ಸವ ಸಂಬಂಧ ಕಾರ್ಯಕ್ರಮಕ್ಕೆ ಬರಬೇಕೆಂದು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿದ್ದೆ. ಅದಕ್ಕೆ ಒಪ್ಪಿ ಬಂದಿದ್ದಕ್ಕಾಗಿ ನನಗೆ ತುಂಬ ಸಂತೋಷವಾಗಿದೆ. ಸೋಮಶೇಖರ್ ಅವರು ಒಬ್ಬ ಕ್ರಿಯಾಶೀಲ ಮಂತ್ರಿಗಳಾಗಿದ್ದಾರೆ. ಕೃಷಿಗೆ ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಪಳಗಿರುವ ಚಿಂತನಾಶೀಲ ಮಂತ್ರಿಗಳಾದ ಅವರ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!