Wednesday, August 10, 2022

Latest Posts

ಒಂದು ತಿಂಗಳಲ್ಲಿ ಸರ್ಕಾರಕ್ಕೆ ಭೂ ಕುಸಿತ ಕಾರಣಗಳ ಕುರಿತು ವರದಿ ಸಲ್ಲಿಕೆ : ಅನಂತ ಹೆಗಡೆ ಅಶೀಸರ

ಹಾವೇರಿ: ಪಶ್ವಿಮ ಘಟ್ಟಗಳಲ್ಲಿ ಭೂ ಕುಸಿತ ಕಾರಣಗಳು ಹಾಗೂ ಪರಿಹಾರ ಕುರಿತಂತೆ ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತಿಳಿಸಿದರು.
ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕಾರ್ಯ ಚಟುವಟಿಕೆ, ಪರಿಸರ ರಕ್ಷಣೆ ಹಾಗೂ ಭೂ ಕುಸಿತ ಕುರಿತಂತೆ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಪಶ್ವಿಮ ಘಟ್ಟಗಳಲ್ಲಿ ಭೂ ಕುಸಿತ ಕಾರಣಗಳು ಹಾಗೂ ಪರಿಹಾರ ಕುರಿತಂತೆ ರಚಿತವಾದ ರಾಜ್ಯ ಮಟ್ಟದ ಉನ್ನತ ಸಮಿತಿ ಕೈಗೊಂಡಿರುವ ಅಧ್ಯಯನದ ವರದಿ ಸದ್ಯದಲ್ಲೇ ದೊರೆಯಲಿದ್ದು ಇದನ್ನು ಒಂದು ತಿಂಗಳಲ್ಲಿ ಸಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಜೀವವೈವಿಧ್ಯ ಮಂಡಳಿಯ ವರ್ಷದ ಕಾರ್ಯ ಪ್ರಗತಿಯನ್ನು ಇದೇ ಡಿಸೆಂಬರ್ ೨೦೨೦ಕ್ಕೆ ಸರ್ಕಾರಕ್ಕೆ ಸಲ್ಲಿಸಲಿದ್ದೇನೆ. ನಾನು ಅಧ್ಯಕ್ಷನಾಗಿ ಡಿಸೆಂಬರ್ ತಿಂಗಳಿಗೆ ಒಂದು ವರ್ಷ ಪೂರೈಸಲಿದ್ದೇನೆ. ವರ್ಷದ ಕಾರ್ಯ ವರದಿಯನ್ನು ಸಲ್ಲಿಸಲಿದ್ದೇನೆ. ಹಾವೇರಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಜೀವವೈವಿದ್ಯ ನಿರ್ವಹಣಾ ಸಮಿತಿ ಹಾಗೂ ಜನತಾ ಜೀವವಿಧ್ಯ ದಾಖಲಾತಿ ಕಾರ್ಯವನ್ನು ಮೂರು ತಿಂಗಳೊಳಗಾಗಿ ಪೂರ್ಣಗೊಳಸಲು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಅರಣ್ಯ ರಕ್ಷಣೆ
ಪಶ್ಚಿಮ ಘಟ್ಟದ ಗಡಿ ವಲಯದಲ್ಲಿರುವ ಹಾವೇರಿ ಜಿಲ್ಲೆಯ ಹಲವೆಡೆ ಪಶ್ಚಿಮ ಘಟ್ಟದ ಕುರುಹಗಳಿವೆ. ಇವುಗಳ ರಕ್ಷಣೆ, ಅಭಿವೃದ್ಧಿ ಅವಶ್ಯವಾಗಿದೆ. ರೆವ್ಯುನ್ಯೂ ವಲಯದಲ್ಲಿರುವ ಅರಣ್ಯ ಪ್ರದೇಶದ ರಕ್ಷಣೆ ಹಾಗೂ ಬೆಳವಣಿಗೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕಂದಾಯ, ಅರಣ್ಯ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ರಕ್ಷಣೆ ಮಾಡಬೇಕು. ಬನವಾಸಿ ಮಾದರಿಯಲ್ಲಿ ಅರಣ್ಯ ಪ್ರದೇಶದಲ್ಲಿ ಟ್ರಂಚಿಂಗ್, ಬಂಡಿಂಗ್ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಈ ಅರಣ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ನಿರ್ಭಂಧಿತ ಔಷಧಿ ಬಗ್ಗೆ ಎಚ್ಚರ
ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಬೀಜ ವೈವಿಧ್ಯತೆಯ ರಕ್ಷಣೆಯ ಬಗ್ಗೆ ಆದ್ಯತೆ ನೀಡಬೇಕು ಹಾಗೂ ಕೃಷಿ ಬಳಕೆಗಾಗಿ ಪೂರೈಕೆಯಾಗುವ ರಾಸಾಯನಿಕ ಕ್ರಿಮಿನಾಶಕ ಹಾಗೂ ರೋಗನಿರೋಧಕ ಔಷಧಿಗಳ ಪೈಕಿ ಕೆಲವೊಂದು ಜೀವಸಂಕುಲ ಹಾಗೂ ಪರಿಸರಕ್ಕೆ ಅಪಾಯ ಎಂದು ಬ್ಯಾನ್ ಮಾಡಲಾಗಿದೆ. ಆದಾಗ್ಯೂ ಕೆಲವು ವ್ಯಾಪಾರಸ್ಥರು ಇಂತಹ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂತವುಗಳ ತಡೆಯುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಅಧಿಕಾರಗಳು ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಹಾಗೂ ಸಾಮಾಜಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಇತರ ಅರಣ್ಯ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss