ಒಂದು ವಾರದ ನ್ಯಾಪಕಿನ್‌ ತ್ಯಾಜ್ಯ 21 ಟನ್ ಗಳು! ಬಳಸಿದ ಡೈಪರ್‌ ಗಳ ವಿಲೇವಾರಿ ಹೇಗೆ?

0
207

– ಪೂರ್ಣಪ್ರಜ್ಞ ಬೇಳೂರು

ವಯಸ್ಕರ ಡೈಪರ್‌ಗಳು, ಸ್ಯಾನಿಟರಿ ನ್ಯಾಪಕಿನ್‌ಗಳು ಮತ್ತು ಮಕ್ಕಳ ಡೈಪರ್‌ಗಳ ವಿಲೇವಾರಿ ಎನ್ನುವುದು ಇಂದು ಕೋಟ್ಯಾಂತರ ರೂಪಾಯಿಗಳ ವ್ಯವಹಾರ. ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಒಂದು ವಾರದ ತ್ಯಾಜ್ಯದಲ್ಲಿ ಈ ಮೂರನ್ನೂ ಬೇರ್ಪಡಿಸಲಾಯಿತು. ಆಗ ಈ ಮೂರರ ಪ್ರಮಾಣ 21 ಟನ್‌ಗಳು! ಹಾಗೇ ಶಿವಮೊಗ್ಗದ ಆರು ಪ್ರಮುಖ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಒಂದು ತಿಂಗಳ ಘನತ್ಯಾಜ್ಯದ ಪ್ರಮಾಣ 293.33 ಟನ್‌ಗಳು. ಅದರಲ್ಲಿ ಡೈಪರ್‌ಗಳು ಮತ್ತು ಸ್ಯಾನಿಟರಿ ನ್ಯಾಪಿಗಳ ಪ್ರಮಾಣ ಸುಮಾರು 10 ಟನ್‌ಗಳು. ನಗರಗಳಲ್ಲಿ ಬಳಸಿ ಎಸೆಯುವ ಫೋಬಿಯಾ ಸಾಮಾನ್ಯ. ಅವರಿಗೆ ವಿಲೇವಾರಿ ಮಾಡಲು ಜಾಗ ಎಲ್ಲಿದೆ?  ಹೋಗಲಿ ಸಂಗ್ರಹಿಸಿದವರು ಏನು ಮಾಡಿದರು?  ಅದನ್ನು ಇನ್‌ಸೆನಿರೇಟರ್ ಬಳಸಿ ಸುಟ್ಟರೇ?
ಅಥವಾ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುಟ್ಟು ಪಲೆಟ್‌ ಗಳನ್ನಾಗಿ ಮಾಡಿದರೆ? ಅದನ್ನು ಕೇಳಿದವರಾರು, ನೋಡಿದವರಾರು, ಕೇಳುವುದಾಗಲೀ, ನೋಡುವುದಾಗಲೀ ಯಾರಿಗೆ ಬೇಕು. ಒಟ್ಟಾರೆ ಅದು ನಮ್ಮ ಕಣ್ಣಿನಿಂದ ದೂರವಾಗಬೇಕು. ಒಯ್ದವರು ಸುಟ್ಟರೋ, ಹುಗಿದರೋ, ಹಾಗೇ ಎಸೆದರೋ ಅದು ಮುಖ್ಯವಲ್ಲ. ಬಳಸಿದವರಾಗಿ, ನಾಗರಿಕರಾಗಿ ಅಥವಾ ಈ ದೇಶದ ಘನಪ್ರಜೆಗಳಾಗಿ ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎನ್ನುವುದಾಗಲೀ, ವಿಲೇವಾರಿ ನನ್ನ ಕರ್ತವ್ಯ, ಈ ಕ್ರಿಯೆಯಲ್ಲಿ ಭಾಗವಹಿಸುವುದು ನನ್ನ ಜವಾಬ್ದಾರಿ ಎನ್ನುವುದಾಗಲೀ ನಮ್ಮೊಳಗಿಲ್ಲ.

ವಿಲೇವಾರಿ ನಮ್ಮ ಕೆಲಸವಲ್ಲವೇ? ತ್ಯಾಜ್ಯಗಳ ಹೆಚ್ಚಳ ಮಹಾನಗರಗಳು ಮತ್ತು ನಗರಗಳಲ್ಲಿ ದಿನೇದಿನೇ ಹೆಚ್ಚುತ್ತಿರುವುದು ಹೊಸ ಸುದ್ದಿಯೇನಲ್ಲ. ಮಕ್ಕಳ ಡೈಪರ್‌ಗಳ ಬಳಕೆ ಹಿಂದೆಂದಿಗಿಂತಲೂ ನಿಯಮಿತವಾಗಿ ಹೆಚ್ಚುತ್ತಲೇ ಇದೆ. ಪಾಲಿಕೆಗಳಿಗೆ ಅಥವಾ ಆಡಳಿತಕ್ಕೆ ಇವು ದೊಡ್ಡ ಹೊರೆ. ಇವುಗಳನ್ನು ಎಲ್ಲಿ ಹಾಕುವುದು, ಏನು ಮಾಡುವುದು ಎನ್ನುವುದನ್ನು ನಿರ್ಧರಿಸಲೇ ಆಗುತ್ತಿಲ್ಲ. ಒಂದು ಇವು ಪ್ಲಾಸ್ಟಿಕ್ ಮತ್ತೊಂದು ಇವುಗಳಲ್ಲಿರುವ ಕೆಟ್ಟ ರಾಸಾಯನಿಕಗಳು ಇಡೀ ಪರಿಸರವನ್ನೇ ಮಾಲಿನ್ಯಗೊಳಿಸುತ್ತಿವೆ. ಡಯಾಕ್ಸಿನ್, ಸೋಡಿಯಮ್ ಪಾಲಿಅಕ್ರಿಲೇಟ್, ಫ್ರಾಗ್ರೆನ್ಸ್‌ಗಳು, ಡೈಗಳು, ಪ್ಲಾಸ್ಟಿಕ್, ಟೋಲಿನ್, ಕ್ಸೈಲಿನ್, ಈಥೈಲ್‌ಬೆನ್‌ಜಿನ್ ಮತ್ತು ಡೈ-ಪೆಂಟೀನ್ ಮುಂತಾದ ರಾಸಾಯನಿಕಗಳನ್ನು ಇವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಡಯಾಕ್ಸಿನ್ ಒಂದು ಮಾರ್ಜಕ ಮಾಧ್ಯಮ. ಇವು ನರ ಸಂಬಂಧಿ ಕಾಯಿಲೆಗಳಿಗೆ ಕಾರಣ, ರೋಗನಿರೋಧಕ ಶಕ್ತಿಯನ್ನು ದಮನ ಮಾಡುತ್ತದೆ ಮತ್ತು ಗರ್ಭ ನಿಲ್ಲದಂತೆ ಮಾಡುತ್ತದೆ ಎಂದು ಪ್ರಾಣಿಗಳ ಮೇಲಿನ ಪ್ರಯೋಗ ಸಾಬೀತು ಪಡಿಸಿದೆ. ಸೋಡಿಯಮ್ ಪಾಲಿಅಕ್ರಿಲೇಟ್ ಒಂದು ಹೀರುಕ ವಸ್ತು. ದೇಹದೊಳಗೆ ಸೇರಿದರೆ ವಿಷವಾಗಿ ಪ್ರವರ್ತಿಸಿ ಅಲರ್ಜಿ ಉಂಟುಮಾಡುವ ಗುಣ ತೋರಿಸುವುದನ್ನು ಸಾಕುಪ್ರಾಣಿಗಳಲ್ಲಿ ಗುರುತಿಸಲಾಗಿದೆ. ಡೈಪರ್‌ಗಳನ್ನು ಗಂಡು ಮಕ್ಕಳಿಗೆ ಹಾಕಿದಾಗ ಜನನಾಂಗದ ಸುತ್ತಲಿನ ಉಷ್ಣಾಂಶ ಹೆಚ್ಚುತ್ತದೆ. ಇದರಿಂದ ಬೀಜಗಳು ಹಾನಿಗೊಳಗಾಗಿ ಮುಂದೆ ಹರಯಕ್ಕೆ ಕಾಲಿಟ್ಟಾಗ ವೀರ್‍ಯೋತ್ಪಾದನೆಗೆ ಅಡಚಣೆ ಉಂಟಾಗುತ್ತದೆ.

ಡೈಪರ್‌ಗಳನ್ನು ತ್ಯಾಜ್ಯವಾಗಿ ಎಲ್ಲೋ ಎಸೆದಾಗ ಅದು ನಿಧಾನವಾಗಿ ತನ್ನ ರಾಸಾಯನಿಕಗಳನ್ನು ನೆಲಕ್ಕೆ, ನೀರಿಗೆ ಮತ್ತು ವಾತಾವರಣಕ್ಕೆ  ಸೇರಿಸತೊಡಗುತ್ತದೆ. ಇದರಿಂದ ಮುಖ್ಯವಾಗಿ ಹೊರಹೊಮ್ಮುವ ಕಾರ್ಬೋಫ್ಲೂರೋ ಕ್ಲೋರಿನ್ ಓಝೋನ್ ಪದರವನ್ನು ಘಾಸಿಗೊಳಿಸುತ್ತದೆ. ಒಂದೊಮ್ಮೆ ಹುಗಿದರೆ ಇವು ಕರಗಲು ಕನಿಷ್ಟ 500 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಎಲ್ಲರೂ ಅಂದುಕೊಂಡಂತೆ ಇವುಗಳನ್ನು ಹುಗಿಯುವುದು ಪರಿಹಾರವಲ್ಲ. ತ್ಯಾಜ್ಯ ಡೈಪರ್‌ಗಳು ಗಾಳಿಗೆ ಮತ್ತು ಸೂರ್‍ಯನ ಕಿರಣಗಳಿಗೆ ಸಿಲುಕಿದರೆ ತನ್ನ ರಾಸಾಯನಿಕ ಗುಣಗಳನ್ನು ಕಳೆದುಕೊಳ್ಳತೊಡಗುತ್ತವೆ. ಮತ್ತು ಬೇಗ ಒಣಗಿ ಕರಗಲು ಪ್ರಾರಂಭಿಸುತ್ತವೆ. ಹೀಗಾಗಿ ಹುಗಿದರೇ ಅಪಾಯ ಹೆಚ್ಚು. ಬದಲಿಗೆ ನಗರ ಪ್ರದೇಶಗಳ ಹೊರವಲಯದಲ್ಲಿ ಖಾಲಿ ಜಾಗಗಳಲ್ಲಿ ಇವುಗಳನ್ನು ಹುಗಿಯುವುದು ಅಥವಾ ಎಸೆಯುವುದನ್ನು ಕಾಣುತ್ತೇವೆ. ಇವುಗಳಲ್ಲಿರುವ ಅಪಾರ ಸಾಮರ್ಥ್ಯದ ಹೀರುಕಗಳ ಶಕ್ತಿಯಿಂದಾಗಿ ನೆಲದ ಮೇಲಿನ ನೀರನ್ನೂ, ವಾತಾವರಣದ ನೀರನ್ನು ಸಹಾ ಹೀರಿಕೊಳ್ಳುತ್ತವೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ.

ತ್ಯಾಜ್ಯ ಡೈಪರ್‌ಗಳ ಪ್ರಮಾಣ ಎಷ್ಟಿರಬಹುದು: ಇಂದು ಈ ಭೂಮಿಯ ಮೇಲೆ ಹಾಗೆ ಎಸೆದ ಡೈಪರ್‌ಗಳ ಪ್ರಮಾಣ ಎಷ್ಟಿರಬಹುದು?  ಲೆಕ್ಕ ಮಾಡೋಣ; ಒಂದು ತಿಂಗಳ ಮಗುವಿಗೆ ದಿನಕ್ಕೆ 8 ರಿಂದ 12 ಡೈಪರ್‌ಗಳು ಬೇಕು. ಅಂದರೆ ತಿಂಗಳಿಗೆ 240 ರಿಂದ 360. ಇನ್ನು ಇಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ದೊಡ್ಡವರ ಡೈಪರ್‌ಗಳ ಲೆಕ್ಕ ತೆಗೆದುಕೊಂಡಿಲ್ಲ. ಕೇವಲ ಮಕ್ಕಳ ಡೈಪರ್‌ಗಳನ್ನು ಈ ಭೂಮಿಯ ಮೇಲೆ ಇಂದು ಸಾಲಾಗಿ ಜೋಡಿಸಿದರೆ ಒಂದು ನೂರು ಸುತ್ತು ಭೂಮಿಯನ್ನು ಸುತ್ತುವರೆಯುವಷ್ಟು ಈಗಾಗಲೇ ಬಳಕೆಯಾಗಿದೆ. ಹಾಗೂ ಅದಿನ್ನೂ ಕರಗದೇ ತನ್ನ ದುಷ್ಟ ಕೆಲಸವನ್ನು ಮಾಡುತ್ತಿದೆ. ಹೀಗೆ ಎಸೆಯುವ ಡೈಪರ್‌ಗಳು ದಿನದ ತ್ಯಾಜ್ಯಗಳೊಂದಿಗೆ ಖಾಲಿ ಜಾಗಗಳಲ್ಲಿ ಅಥವಾ ಕಸದ ರಾಶಿಯಲ್ಲಿ ಇರುತ್ತವೆ ಅಥವಾ ರಸ್ತೆ, ಚರಂಡಿ ಮುಂತಾದ ಕಡೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದು ಇಲಿಗಳು, ದಂಶಕಗಳು, ನಾಯಿ ಮುಂತಾದ ಪ್ರಾಣಿಗಳ ಬಾಯಿಗೆ ಸಿಕ್ಕು ನಮ್ಮ ಸುತ್ತಲೇ ಅಡ್ಡಾಡುತ್ತಿರುತ್ತವೆ. ಒಟ್ಟಾರೆ ನಮ್ಮ ಉಸಿರಾಟ, ಚರ್ಮಗಳ ಮೇಲೆ ದಾಳಿ ಇಡುವುದು ನಮಗೆ ಗೋಚರವಾಗುವುದಿಲ್ಲ.

ನವಜಾತ ಶಿಶುಗಳ ಇಂಟೆನ್ಸೀವ್ ಕೇರ್ ಯೂನಿಟ್‌ಗಳಲ್ಲಿ ಡೈಪರ್‌ಗಳನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಮಗುವಿನ ಜನನಾಂಗದ ಸೋಂಕು ಇದ್ದರೆ, ಅದರ ಕೊಳೆಯುವಿಕೆ, ಕೀವಾಗುವಿಕೆ ಮುಂತಾದವುಗಳೆಲ್ಲಾ ಇದರಿಂದ ಕಡಿಮೆಯಾಗುತ್ತದೆ ಎನ್ನುವುದು ಒಂದು ಕುತೂಹಲಕರವಾದ ವರದಿ. ಹೀಗೆ 35 ಹಾಸಿಗೆಗಳಿರುವ ಆಸ್ಪತ್ರೆಯೊಂದರಲ್ಲಿ ಬಳಸಲಾಗುವ ಡೈಪರ್‌ಗಳ ಪ್ರಮಾಣ ದಿನನಿತ್ಯ 25 ಕಿಲೋಗ್ರಾಮ್‌ಗಳು. ತಿಂಗಳಿಗೆ 750 ಕಿಲೋಗ್ರಾಮ್‌ಗಳು. ಇವುಗಳನ್ನು ಆಸ್ಪತ್ರೆ ತ್ಯಾಜ್ಯ ಅಥಾ ಮೆಡಿಕಲ್ ವೇಸ್ಟ್ ಎನ್ನಲಾಗುತ್ತದೆ.
ಮನೆಮನೆಗಳಲ್ಲಿ ಇಂದು ಅಮ್ಮಂದಿರು ಮಕ್ಕಳಿಗೆ ಮಲಮೂತ್ರಗಳ ವಿಸರ್ಜನೆ ಪದೇಪದೇ ಮಾಡಿಸುವುದನ್ನು ತಪ್ಪಿಸಿಕೊಳ್ಳಲು ಅತಿಯಾಗಿ ಡೈಪರ್‌ಗಳ ಬಳಕೆ ಮಾಡುತ್ತಿರುವುದು ಸಾಮಾನ್ಯ. ಆಸ್ಪತ್ರೆಗಳಲ್ಲಿ ಬಳಸಿದ್ದನ್ನು ನೋಡಿ ಅಥವಾ ತಮಗೆ ಮಡಿಲು ಕಿಟ್‌ನಲ್ಲಿ ಕೊಟ್ಟ ಡೈಪರ್‌ಗಳನ್ನು ಒಮ್ಮೆ ಬಳಸಿದ ಮೇಲೆ, ಕೆಲವು ಬಡ ಮತ್ತು ಮಧ್ಯಮ ವರ್ಗದ ಅಮ್ಮಂದಿರು ದಿನಾಲೂ 8 ರಿಂದ 12 ಡೈಪರ್‌ಗಳನ್ನು ಬದಲಿಸುವ ಬದಲು ಒಂದೋ ಎರಡೋ ಡೈಪರ್‌ಗಳನ್ನೇ ದಿನವಿಡೀ ಬಳಸುತ್ತಾರೆ. ಇದು ಇನ್ನಷ್ಟು ಅಪಾಯಕಾರಿ. ಡೈಪರ್‌ಗಳಲ್ಲಿರುವ ರಾಸಾಯನಿಕಗಳೊಂದಿಗೆ ಮಲಮೂತ್ರಗಳಲ್ಲಿರುವ ರಾಸಾಯನಿಕಗಳು ಮತ್ತು ರೋಗಾಣುಗಳು ನಮ್ಮ ದೇಹದ ಮೇಲೆ ಸತತವಾಗಿ ದಾಳಿ ಇಟ್ಟು ಇನ್ನಷ್ಟು ರೋಗಗಳಿಗೆ ಕಾರಣವಾಗುತ್ತವೆ.

ಪರ್ಯಾಯ ಮಾರ್ಗಗಳ ಅನ್ವೇಷಣೆ: ಈಗಾಗಲೇ ಹಸಿ ತ್ಯಾಜ್ಯ ಮತ್ತು ಘನತ್ಯಾಜ್ಯಗಳ ವಿಂಗಡಣೆ  ಪ್ರಾರಂಭವಾಗಿದೆ. ಮುಂದೆ ಇದನ್ನು ಎಲ್ಲಾ ನಾಗರಿಕರು ಪಾಲಿಸುತ್ತಾರೆಂಬ ಭರವಸೆ ಮೂಡುತ್ತಿದೆ. ಇದರೊಂದಿಗೆ ವಯಸ್ಕರ ಡೈಪರ್‌ಗಳು, ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಮಕ್ಕಳ ಡೈಪರ್‌ಗಳನ್ನು ಪ್ರತ್ಯೇಕಗೊಳಿಸುವ ಕೆಲಸವೂ ಆಗಬೇಕಿದೆ. ಹಾಗೂ ಇವುಗಳನ್ನು ವಿಭಿನ್ನ ರೀತಿಯಲ್ಲಿ ವಿಲೇವಾರಿ ಮಾಡಬೇಕಾದ ಆಲೋಚನೆ ಮಾಡಬೇಕಿದೆ.
ಹೇಗೆಂದರೆ :
ವಯಸ್ಕರ ಡೈಪರ್‌ಗಳು, ಸ್ಯಾನಿಟರಿ ನ್ಯಾಪಕಿನ್‌ಗಳು ಮತ್ತು ಮಕ್ಕಳ ಡೈಪರ್‌ಗಳನ್ನು ಚಿಂದಿ ಚಿಂದಿ ಮಾಡುವುದು. ಉದಾಹರಣೆಗೆ ಕ್ಯಾಲ್ಸಿಯಮ್ ಕ್ಲೋರೈಡ್ ಮತ್ತು ಉಪ್ಪನ್ನು ಬಳಸಿ ಅದರಲ್ಲಿರುವ ಅಕ್ರಲೈಟ್‌ಗಳನ್ನು ಸಮತೋಲನಗೊಳಿಸುವುದು. ಚೂರಾದ ವಸ್ತುಗಳನ್ನು ಪರಿಸರ ಸ್ನೇಹಿ ಮಾರ್ಜಕಗಳನ್ನು ಬಳಸಿ ತೊಳೆದು ಸ್ವಚ್ಛಗೊಳಿಸುವುದು. ಮುಚ್ಚಿದ ಸಿಲಿಂಡರ್‌ನೊಳಗೆ ಹಾಕಿ ಜೋರಾಗಿ ಸುತ್ತಿಸಿದಾಗ ಅದರಲ್ಲಿರುವ ಪ್ಲಾಸ್ಟಿಕ್ ವಸ್ತುಗಳು ಬೇರಾಗುತ್ತವೆ. ಅದನ್ನು ತೆಗೆದು ಉಳಿದಿರುವ ಪಲ್ಪ್‌ನ್ನು ಮರುಬಳಕೆ ಮಾಡುವುದು. ಅಥವಾ ಇಂಧನವಾಗಿ ಮಾರ್ಪಡಿಸುವುದು. ಹೀಗೆ ಮಾಡುವುದರಿಂದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ. ಎಲ್ಲಕ್ಕೂ ಮೊದಲು ಇವುಗಳನ್ನು ಪ್ರತ್ಯೇಕವಾಗಿ ತೆಗದಿಡುವುದು ಮತ್ತು ಪ್ರತ್ಯೇಕ ಕಸದ ತೊಟ್ಟಿಗೆ ಹಾಕುವುದು ಅವಶ್ಯಕ. ಅದರಲ್ಲೂ ಸಾಮಾನ್ಯ, ಸೋಂಕಿತ ಮತ್ತು ಮರುಬಳಕೆ ಮಾಡಬಲ್ಲ ಡೈಪರ್‌ಗಳನ್ನು ಪ್ರತ್ಯೇಕಗೊಳಿಸುವುದೂ ಸಹಾ ಮುಂದಿನ ಹೆಜ್ಜೆಯಾಗಬೇಕಿದೆ.

ಬಟ್ಟೆ ಡೈಪರ್‌ಗಳು: ಬಳಸಿ ಎಸೆಯುವ ಸಂಸ್ಕೃತಿ ಬಂದ ಮೇಲೆ ಈ ರೀತಿಯ ತ್ಯಾಜ್ಯಗಳ ಪ್ರಮಾಣ ಹೆಚ್ಚಿದ್ದು. ಅಂದು ಎಲ್ಲದಕ್ಕೂ ಹತ್ತಿ ಬಟ್ಟೆಯ ಬಳಕೆ ಇತ್ತು. ಇಂದೂ ಸಹಾ ಹತ್ತಿ ಬಟ್ಟೆಯಿಂದಲೇ ಡೈಪರ್‌ಗಳನ್ನು ತಯಾರಿಸಬಹುದಾಗಿದೆ. ಹಾಗೂ ಅವುಗಳನ್ನು ತೊಳೆದು ಮತ್ತೆಮತ್ತೆ ಬಳಸಬಹುದಾಗಿದೆ. ಈಗಾಗಲೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಹತ್ತಿ ಬಟ್ಟೆಯಿಂದ ಮರುಬಳಕೆ ಮಾಡುವಂತೆ ತಯಾರಿಸಲಾಗುತ್ತಿದೆ. ಇದನ್ನು ನೆರೆ ಹಾವಳಿಯಿಂದ ಗಂಜಿಕೇಂದ್ರ ಸೇರಿದ್ದ ಮಹಿಳೆಯರಿಗೆ ನೀಡಿ ಅವರನ್ನು ಸೋಂಕಿನಿಂದ ರಕ್ಷಿಸಲಾಗಿದೆ. ಹತ್ತಿಯಿಂದ ತಯಾರಿಸಲಾದ ಒಂದು ಸ್ಯಾನಿಟರಿ ನ್ಯಾಪಕಿನ್‌ನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿಕೊಂಡರೆ ಕನಿಷ್ಟ ಎಂಟರಿಂದ ಹತ್ತು ತಿಂಗಳುಗಳ ಕಾಲ ಮರುಬಳಕೆ ಮಾಡಬಹುದಾಗಿದೆ. ಹೀಗೆ ಹೆಚ್ಚು ದ್ರವ ಹೀರುವ ಬಟ್ಟೆ ಡೈಪರ್‌ಗಳ ತಯಾರಿಕೆ ಮಾಡಿದರೆ ತ್ಯಾಜ್ಯದ ಪ್ರಮಾಣ ಕಡಿಮೆಯಾಗಬಹುದು. ಹಾಗೇ ಬಟ್ಟೆಯಾದ ಕಾರಣ ಪರಿಸರಕ್ಕೆ ಮಾರಕವಾಗದೇ, ಆರೋಗ್ಯಕ್ಕೆ ಹಾನಿಯಾಗದೇ, ಜೇಬಿಗೆ ಹೊರೆಯಾಗದೇ, ಬಳಸಲು ಹಿತವಾಗಿ ಇರುತ್ತದೆ.

LEAVE A REPLY

Please enter your comment!
Please enter your name here