Monday, July 4, 2022

Latest Posts

ಒಂದೂವರೆ ತಿಂಗಳ ನಂತರ ಆರಂಭವಾಯ್ತು ಅಡಿಕೆ ವ್ಯಾಪಾರ| ಮೊದಲ ದಿನ ಉತ್ತಮ ಪ್ರತಿಕ್ರಿಯೆ!

ಶಿವಮೊಗ್ಗ: ಬರೋಬ್ಬರಿ ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಅಡಿಕೆ ಮಾರುಕಟ್ಟೆ ಸೋಮವಾರದಿಂದ ಪುನರಾರಂಭಗೊಂಡಿದೆ.
ಅಡಿಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರಾಜ್ಯದಲ್ಲೂ ಅಡಿಕೆ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ಅದರೆ ಕೊರೋನಾ ಲಾಕ್ ಡೌನ್ ಅಡಿಕೆ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದ್ದರಿಂದ ವಹಿವಾಟು ಸ್ಥಗಿತಗೊಂಡಿತ್ತು.
ಕಳೆದ ಮಾರ್ಚ್ 24 ರಿಂದ ಜಿಲ್ಲೆಯಲ್ಲಿ ಅಡಿಕೆ ವಹಿವಾಟು ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ಈಗ ಸೋಮವಾರದಿಂದ ಅಡಿಕೆ ಮಾರಾಟ ಆರಂಭವಾಗಿದೆ. ಆರಂಭದ ದಿನ ವ್ಯಾಪಾರಸ್ಥರು ಉತ್ಸುಕತೆಯಿಂದಲೇ ಪಾಲ್ಗೊಂಡಿರುವುದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅಡಿಕೆ ಮಾರುಕಟ್ಟೆಯೂ ಸ್ಥಗಿತವಾಗಿದ್ದರಿಂದ ರೈತರ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಉಂಟಾಗಿತ್ತು. ಆರ್ಥಿಕ ಚಟುವಟಿಕೆ ಮೇಲೂ ಪರಿಣಾಮ ಬೀರಿತ್ತು. ಈಗ ಅಡಿಕೆ ಮಾರಾಟ ಆರಂಭಗೊಂಡಿರುವುದು ರೈತ ವಲಯದಲ್ಲಿ ನೆಮ್ಮದಿ ಮೂಡಿಸಲಿದೆ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಸೋಮವಾರ ಇಲ್ಲಿನ ಎಪಿಎಂಸಿಯಲ್ಲಿ 94 ಲಾಟ್ ಗಳಿಂದ ಸುಮಾರು 600 ಮೂಟೆ ಅಡಿಕೆ ಖರೀದಿ ಆಗಿದೆ. ಕನಿಷ್ಠ 42,000 ರೂ.ಗಳಿಂದ ಗರಿಷ್ಠ 63,000(ಸರಕು) ರೂ.ವರೆಗೂ ಖರೀದಿ ಆಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸರಕು 42,125 ರೂ.ಗಳಿಂದ 68,103 ರೂ, ಬೆಟ್ಟೆ-32,590 ರೂ.ಗಳಿಂದ 39,109 ರೂ., ರಾಶಿ 36,011 ರೂ.ವರೆಗೆ ಖರೀದಿ ಮಾಡಲಾಗಿದೆ.
ಪ್ರಮುಖ ಸಹಕಾರಿ ಸಂಸ್ಥೆಯಾಗಿರುವ ಮ್ಯಾಮ್ಕೋಸ್ ನಲ್ಲಿ ಕೂಡ ವಹಿವಾಟು ಆರಂಭವಾಗಿದೆ. ಅಡಿಕೆ ಮಾರಾಟ ಆರಂಭಕ್ಕಿಂತ ರೈತರಲ್ಲಿ ವಿಶ್ವಾಸ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ವ್ಯಾಪಾರಸ್ಥರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ ಹೊಸದಿಗಂತಕ್ಕೆ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss