Thursday, August 11, 2022

Latest Posts

ಒಂದೂವರೆ ದಶಕದ ಹಿಂದೆ ಸ್ಥಗಿತಗೊಂಡಿದ್ದ ಅಜ್ಜರಕಾಡು ಭುಜಂಗ ಪಾರ್ಕ್‌ನ ರೇಡಿಯೋ ಟವರ್ ಮತ್ತೆ ಕಾರ್ಯಾರಂಭ

ಉಡುಪಿ: ರೇಡಿಯೋ ಪ್ರಸಾರ ಮಾಡುವವರು ಆಕಾಶವಾಣಿ ಮಂಗಳೂರು….
ಕಳೆದ ಒಂದುವರೆ ದಶಕದ ಹಿಂದೆ ಸ್ಥಗಿತಗೊಂಡಿದ್ದ ಉಡುಪಿ ನಗರದ ಅಜ್ಜರಕಾಡು ಭುಜಂಗ ಪಾರ್ಕ್‌ನ ರೇಡಿಯೋ ಟವರ್ ಗಾಂಧೀ ಜಯಂತಿ ಅಂಗವಾಗಿ ಶುಕ್ರವಾರದಿಂದ ಮತ್ತೆ ಕಾರ್ಯಾರಂಭಿಸಿದೆ.
ಪಾರ್ಕ್‌ನ ಮಧ್ಯೆ ಕರಿಕಲ್ಲಿನ ಬಂಡೆ ಇದ್ದು, 1934ರಲ್ಲಿ ಉಡುಪಿಗೆ ಭೇಟಿದ ಮಹಾತ್ಮ ಗಾಂಧೀಜಿ ಅವರು ಆ ಕಲ್ಲುಬಂಡೆಯ ಮೇಲೆ ಕುಳಿತಿದ್ದರು. ಉಡುಪಿಯ ಜನರಿಗೆ ಅಹಿಂಸಾ ತತ್ತ್ವ, ಉಪ್ಪಿನ ಸತ್ಯಾಗ್ರಹ, ಚಳವಳಿಗಳ ಬಗ್ಗೆ ತಿಳಿ ಹೇಳಿದ್ದರು. ಅಲ್ಲದೇ ಹೋರಾಟಕ್ಕಾಗಿ ಆರ್ಥಿಕ ಸಂಪನ್ಮೂಲದ ಸಂಗ್ರಹವನ್ನೂ ಮಾಡಿದ್ದರು. ಅದಾಗಿ ನಾಲ್ಕು ವರ್ಷಗಳಲ್ಲಿ ಅಲ್ಲೊಂದು ರೇಡಿಯೋ ಟವರ್ ಉದ್ಭವಿಸಿತು!
ಭುಜಂಗ ನಿಲಯದಿಂದಾಯಿತು ಭುಜಂಗ ಪಾರ್ಕ್
ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್ ಪ್ರಾಂತ್ಯ ವ್ಯಾಪ್ತಿಗೆ ಒಳಪಟ್ಟ ಉಡುಪಿಯ ಡಾ. ಯು.ಎಸ್. ನಾರಾಯಣ ರಾವ್ ಅವರು 1938ರಲ್ಲಿ ತಮ್ಮ ತಂದೆ ಯು. ಭುಜಂಗ ರಾವ್ ಅವರ ನೆನಪಿಗಾಗಿ ಎರಡು ಮಹಡಿಯ ’ಭುಜಂಗ ನಿಲಯ’ದ ಸಹಿತ ಜಾಗವನ್ನು ದಾನವಾಗಿ ನೀಡಿದ್ದರು. ಮುಂದೆ ಅದು ಭುಜಂಗ ಪಾರ್ಕ್ ಎಂದು ಹೆಸರು ಪಡೆದಿದೆ. ಉಡುಪಿ ನಗರಸಭೆಯೂ ಇಡೀ ಪಾರ್ಕ್‌ಗೆ ಭುಜಂಗ ಪಾರ್ಕ್ ಎಂಬ ಹೆಸರನ್ನೇ ಮುಂದುವರಿಸಿದೆ.
15 ವರ್ಷಗಳಿಂದ ಮೂಲೆಗುಂಪಾಗಿದ್ದ ಟವರ್!
ಎರಡು ಮಹಡಿಗಳ ಈ ಭುಜಂಗ ನಿಲಯದಲ್ಲಿ ಪ್ರತಿದಿನ ರೇಡಿಯೋ ಕಾರ್ಯಕ್ರಮ ಪ್ರಸಾರ ನಡೆಯುತ್ತಿತ್ತು. ಆ ಕಾಲದಲ್ಲಿ ಜನರಿಗೆ ಮನರಂಜನೆಯ ಸ್ಥಳವಾಗಿ ಮಾರ್ಪಾಡಾಗಿತ್ತು. ರೇಡಿಯೋ ಕಾರ್ಯಕ್ರಮ ಪ್ರಸಾರವಾಗುತ್ತಿದ್ದುದರಿಂದ ಭುಜಂಗ ನಿಲಯವು ಎಲ್ಲರ ಬಾಯಲ್ಲಿ ರೇಡಿಯೋ ಟವರ್ ಎಂದೇ ಜನಜನಿತವಾಯಿತು. ಕಳೆದ 15 ವರ್ಷಗಳ ಹಿಂದಿನ ವರೆಗೆ ಈ ಟವರ್‌ನ ಸುತ್ತಮುತ್ತ ನಾಗರಿಕರು ಕುಳಿತು ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುತ್ತಿದ್ದರು. ನವ ಮಾಧ್ಯಮಗಳ ಪ್ರವೇಶದ ನಂತರ ಉಡುಪಿಯ ಮನರಂಜನೆಯ ಕೇಂದ್ರವಾಗಿದ್ದ ರೇಡಿಯೋ ಟವರ್ ಮೂಲೆಗುಂಪಾಗಿತ್ತು. ಈ ಕಟ್ಟಡದ ಕೆಳಗೆ ನಿರಾಶ್ರಿತರು, ಕುಡುಕರು, ಬೀದಿನಾಯಿಗಳು ಆಶ್ರಯಪಡೆದಿದ್ದರು. ಈ ಬಗ್ಗೆ ಕಳೆದ ಬಾರಿಯ ಗಾಂಧೀ ಜಯಂತಿ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿ ಅವರ ಗಮನ ಸೆಳೆಯಲಾಗಿತ್ತು.
ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಸೂಚನೆಯಂತೆ ಉಡುಪಿ ನಗರಸಭೆ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮತ್ತೆ ಕಾರ್ಯಾಚರಿಸುವಂತೆ ಮಾಡಿದೆ. ಹೊಸ ರೇಡಿಯೋ, ನಾಲ್ಕು ಹಾರ್ನ್ (ಮೈಕ) ಸಹಿತ ಹಲವು ಉಪಕರಣಗಳನ್ನು ಮತ್ತೆ ಜೋಡಿಸಿದ್ದಾರೆ. ಪುನರ್ ಸ್ಥಾಪನೆಗೊಂಡ ರೇಡಿಯೋ ಟವರ್‌ನ ಪ್ರಸಾರ ಕಾರ್ಯಕ್ಕೆ ಶಾಸಕ ಕೆ. ರಘುಪತಿ ಭಟ್ ಅವರು ಶುಕ್ರವಾರ ಚಾಲನೆ ನೀಡಿದರು. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಜೊತೆಗಿದ್ದರು.
ಪ್ರತಿದಿನ ಎರಡುವರೆ ತಾಸು ಕಾರ್ಯಕ್ರಮ ಪ್ರಸಾರ
ಸದ್ಯ ಉಡುಪಿಯ ರೇಡಿಯೋ ಟವರ್‌ನಲ್ಲಿ ಪ್ರತಿದಿನ ಸಂಜೆ 5.30ರಿಂದ 8ಗಂಟೆಯವರೆಗೆ ಮಂಗಳೂರು ಆಕಾಶವಾಣಿ ಕಾರ್ಯಕ್ರಮವನ್ನು ಆಲಿಸಬಹುದಾಗಿದೆ. ಭುಜಂಗ ಪಾರ್ಕ್‌ನಲ್ಲಿರುವ ಟವರ್ ಕೆಳಗಿನ ಕಲ್ಲುಬಂಡೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಹೆಚ್ಚು ಕರ್ಕಶವಿಲ್ಲದೇ ಪಾರ್ಕ್‌ನೊಳಗಿನ ಶೋತೃಗಳಿಗೆ ಮಾತ್ರ ಕೇಳಲಿದೆ. ಅಲ್ಲದೇ ಈ ಹಿಂದಿನಂತೆ ಬೆಳಗ್ಗೆ 8, ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಟವರ್ ಮೂಲಕ ಸೈರನ್ ಕೂಡ ಮೊಳಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss