ಹೊಸದಿಗಂತ ವರದಿ, ಮೈಸೂರು:
ಮೈಸೂರಿನ ವಿಜಯನಗರದಲ್ಲಿ ಮೈಸೂರು ತಾಲೂಕು ಒಕ್ಕಲಿಗರ ಸಂಘದಿoದ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಅಗತ್ಯವಾಗಿರುವ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಜಯನಗರದಲ್ಲಿ ನಡೆದ ಬಸವ ಭವನ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮೈಸೂರು ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ಗೌಡ, ವಿಜಯನಗರದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಒಕ್ಕಲಿಗರ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಒಂದುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಸಮುದಾಯ ಭವನದ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯವನ್ನೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಹಾಗಾಗಿ ಭವನ ನಿರ್ಮಾಣಕ್ಕೆ ಅಗತ್ಯವಾಗಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಬಜೆಟ್ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬೇಕಾಗಿರುವಂತಹ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಬಳಿಕ ಹೇಮಂತ್ಕುಮಾರ್ ಗೌಡ ಅವರು, ವೇದಿಕೆಯಲ್ಲಿದ್ದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಜಿ.ಟಿ.ದೇವೇಗೌಡರಿಗೆ ಮನವಿ ಸಲ್ಲಿಸಿ, ಸಮುದಾಯ ಭವನಕ್ಕೆ ಅಗತ್ಯವಾಗಿರುವ ಅನುದಾನ ಬಿಡುಗಡೆ ಮಾಡಿಕೊಡಲು ಮನವಿ ಮಾಡಿದಾಗ, ಈ ಬಗ್ಗೆ ಕ್ರಮವಹಿಸುವುದಾಗಿ ಸಚಿವರು, ಶಾಸಕರು ಭರವಸೆ ನೀಡಿದರು.