Tuesday, June 28, 2022

Latest Posts

ಒಡಹುಟ್ಟಿದ ಅಕ್ಕನನ್ನೇ ನಡುರಸ್ತೆಯಲ್ಲೇ ಎಳೆದಾಡಿ ಹಲ್ಲೆ ನಡೆಸಿದ ತಮ್ಮ!

ಹೊಸ ದಿಗಂತ ವರದಿ, ನಾಗಮಂಗಲ:

ಸ್ಥಳೀಯ ಸಂಸ್ಥೆಯ ಚುನಾವಣೆ ವಿಚಾರವಾಗಿ ಇಡೀ ಮನುಕುಲವೇ ತಲೆತಗ್ಗಿಸುವ ರೀತಿಯಲ್ಲಿ ಒಡಹುಟ್ಟಿದ ಅಕ್ಕನನ್ನೇ ತಮ್ಮನೊಬ್ಬ ನಡುರಸ್ತೆಯಲ್ಲೇ ಎಳೆದಾಡಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಗೊಲ್ಲರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಪಾಧ್ಯಕ್ಷೆ ಚುನಾವಣೆ ವಿಚಾರಕ್ಕೆ ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಎಂಬಂತೆ ತವರೂರಿಗಿಂತ ಸೊಸೆಯಾಗಿ ಬಂದಿರುವ ನನ್ನೂರಿನ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ತಿಳಿಸಿದ ಅಕ್ಕನಿಗೆ ಸ್ವಂತ ತಮ್ಮನೇ ಈ ಕೃತ್ಯ ಎಸಗಿದ್ದಾನೆ.
ತಾಲೂಕಿನ ಗೊಲ್ಲರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ 13ಸ್ಥಾನಗಳ ಪೈಕಿ ಮೀಸಲಾತಿ ಸ್ಥಾನಗಳಿಗೆ ಅಭ್ಯರ್ಥಿಗಳಿಲ್ಲದ ಹಿನ್ನಲೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಂಕಾಪುರ ಗ್ರಾಮದ 6ಮಂದಿ ಮತ್ತು ಗೊಲ್ಲರಹಳ್ಳಿ ಗ್ರಾಮದ ಮೂವರು ಸೇರಿ ಒಟ್ಟು 9ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನಗಳಿಗೆ ಡಿ.2ರ ಬುಧವಾರ ಚುನಾವಣೆ ನಿಗಧಿಯಾಗಿತ್ತು.
ಕಳೆದ ಐದು ವರ್ಷಗಳ ಕಾಲ ಬಂಕಾಪುರ ಗ್ರಾಮದವರು ಸಂಘದ ಅಧ್ಯಕ್ಷರಾಗಿದ್ದ ಹಿನ್ನಲೆಯಲ್ಲಿ ಈ ಬಾರಿ ಗೊಲ್ಲರಹಳ್ಳಿ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬೇಕೆಂದು ಗ್ರಾಮದ ಮುಖ್ಯಸ್ಥರು ನಿರ್ಧರಿಸಿ, ಅಧ್ಯಕ್ಷೆ ಸ್ಥಾನಕ್ಕೆ ಗೊಲ್ಲರಹಳ್ಳಿ ಗ್ರಾಮದ ನಾಗಮ್ಮ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಬಂಕಾಪುರದ ಲಕ್ಷ್ಮಮ್ಮ ಎಂಬುವರಿಂದ ನಾಮಪತ್ರ ಹಾಕಿಸಿದ್ದರು.
ಬಂಕಾಪುರ ಗ್ರಾಮದಿಂದ ಗೊಲ್ಲರಹಳ್ಳಿ ಗ್ರಾಮಕ್ಕೆ ಕಳೆದ 35 ವರ್ಷಗಳ ಹಿಂದೆ ಸೊಸೆಯಾಗಿ ಬಂದಿರುವ ಶಾರದಮ್ಮ ಎಂಬುವರೂ ಸಹ ಸಂಘದ ನಿರ್ದೇಶಕರಾಗಿದ್ದು, ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಶಾರದಮ್ಮನ ತಮ್ಮ ಬಿ.ರಾಜೇಗೌಡ ಎಂಬುವರು ಗೊಲ್ಲರಹಳ್ಳಿ ಅಭ್ಯರ್ಥಿ ಸಂಘದ ಅಧ್ಯಕ್ಷೆಯಾಗುವುದಕ್ಕೆ ನೀನು ಬೆಂಬಲಿಸಬಾರದೆಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾರದಮ್ಮ ನಾನು ಬಂಕಾಪುರದ ಹೆಣ್ಣುಮಗಳಾಗಿದ್ದರೂ ಸಹ ಮದುವೆಯಾಗಿ ಈ ಊರಿನ ಸೊಸೆಯಾಗಿ ಬಂದಿದ್ದೇನೆ. ಹಾಗಾಗಿ ಇದು ನನ್ನೂರು. ನನ್ನೂರಿನ ಅಭ್ಯರ್ಥಿಯನ್ನೇ ನಾನು ಬೆಂಬಲಿಸುತ್ತೇನೆ. ನನ್ನನ್ನು ತಡೆಯುವ ಅಧಿಕಾರ ನಿನಗಿಲ್ಲ ಎಂದು ತಮ್ಮನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಬಿ.ರಾಜೇಗೌಡ ಸ್ವಂತ ಅಕ್ಕನನ್ನು ನಡುರಸ್ತೆಯಲ್ಲಿ ಸ್ಥಳೀಯ ಸಾರ್ವಜನಕರೆದುರೇ ಎಳೆದಾಡಿ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಮಧ್ಯೆ ಪ್ರವೇಶಿಸಿದ ಶಾರದಮ್ಮನ ಪುತ್ರ ಕುಮಾರ್ ಸೋದರಮಾವ ನಡೆಸುತ್ತಿದ್ದ ಹಲ್ಲೆಯಿಂದ ತಾಯಿಯನ್ನು ರಕ್ಷಿಸಿದ ಬಳಿಕ, ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿ ಗ್ರಾಮಕ್ಕೆ ಕರೆತಂದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆದಿದ್ದರೂ ಸಹ ಮಾನವೀಯತೆ ದೃಷ್ಠಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲು ಶಾರದಮ್ಮ ಮುಂದಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss