ಒಮ್ಮೊಮ್ಮೆ ನಮಗೆ ನಾವು ತುಂಬಾ ಒಂಟಿ ಅಂಥನಿಸುತ್ತದೆ. ನಮಗಾಗಿ ಹಪಹಪಿಸುವ ಒಂದೇ ಒಂದು ಜೀವಕ್ಕಾಗಿ ದಿನವಿಡಿ ಚಡಪಡಿಸುತ್ತೇವೆ. ಹಗಲು ರಾತ್ರಿಗಳ ಪರಿವಿಲ್ಲದೆ ಬಿಕ್ಕಳಿಸುತ್ತೇವೆ. ನಿಜ, ಒಂಟಿತನ ಇದೆಯಲ್ಲಾ ಅದು ಎಂಥವರನ್ನು ಹಿಂಡಿಹಾಕುವಂತದ್ದು. ಬದುಕಿದ್ದೂ ಶವದಂತಾಗಿ ಹೋಗುತ್ತೇವೆ. ನನ್ನನ್ನು ಯಾರೂ ಗುರುತಿಸುತ್ತಿಲ್ಲವೇನೋ, ಗಮನಿಸುತ್ತಿಲ್ಲವೇನೋ ಯಾರಿಗೂ ನಾವು ಬೇಕಾಗಿಲ್ಲವೇನೋ ಹೀಗೆಲ್ಲಾ ಅನಿಸಿದಾಗ ಬದುಕಿನೆಡೆಗಿನ ಮಮಕಾರವೇ ಸತ್ತುಹೋಗುತ್ತದೆ. ಒಂಟಿ ಬದುಕಿಗೆ ಜಂಟಿಯಾಗುವ ಕೆಲವೊಂದಿಷ್ಟು ನಿಯಮಗಳನ್ನು ಅಳವಡಿಸಿಕೊಂಡು ನೋಡಿ. ಬದುಕಿಗೊಂದು ಜೀವಂತಿಕೆ ಬರುತ್ತದೆ.
ಪುಸ್ತಕ ಓದಿ:
ಪುಸ್ತಕಗಳು ಸಿಹಿನೀರಿನ ಕೊಳಗಳಿದ್ದಂತೆ ಎಷ್ಟೇ ಬೊಗಸೆ ತುಂಬಿಕೊಂಡರು ಖಾಲಿಯಾಗಲಾರದೆಂದು ಒಬ್ಬ ಮೇದಾವಿ ಹೇಳಿದ್ದಾನೆ. ನೀವು ಪುಸ್ತಕ ಓದುವ ಚಟ ಹಚ್ಚಿಸಿಕೊಳ್ಳಿ. ಒಂದೊಳ್ಳೆ ಪುಸ್ತಕ ಒಳ್ಳೆಯ ಮಿತ್ರನಾಗಬಲ್ಲದು. ನಿಮ್ಮ ಅಮೂಲ್ಯ ಸಮಯವನ್ನು ಪುಸ್ತಕದೊಡನೆ ಕಳೆಯಿರಿ. ನಿಮ್ಮ ಜ್ಞಾನವು ಹೆಚ್ಚುತ್ತದೆ, ಶಬ್ಧಬಂಡಾರ ಬೆಳೆಯುತ್ತದೆ. ಹೊಸ ಪುಸ್ತಕಗಳ ಹುಡುಕಾಟದಲ್ಲಿ ಒಂಟಿತನ ಮರೆತು ಹೋಗುತ್ತದೆ.
ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿಸಿಕೊಳ್ಳಿ:
ಮಾಡಿದ ಉಪಕಾರ ಮರೆತು ಮನುಷ್ಯ ದ್ರೋಹ ಬಗೆಯಬಹುದು, ಬೆನ್ನಿಗೆ ಚುರಿ ಹಾಕಿ ಇರಿಯಬಹುದು. ಆದರೆ ಪ್ರಾಣಿಗಳು ನಾವು ಹಾಕುವ ಮುಷ್ಟಿ ಅನ್ನಕ್ಕಾಗಿ ಬದುಕಿರುವವರೆಗೂ ಋಣ ತೀರಿಸುತ್ತವೆ. ದ್ರೋಹ, ವಂಚನೆ, ಅನ್ಯಾಯಗಳು, ಅಕ್ಷರ ಸಹ ಅವಕ್ಕೆ ತಿಳಿದಿರುವುದಿಲ್ಲ. ಹಿಡಿ ಪ್ರೀತಿ ಕೊಟ್ಟರೆ ಸಾಕು ನಿಮ್ಮ ದಾರಿ ಕಾಯುತ್ತಾ ಮಂಡಿ ಊರಿ ಕುಳಿತಿರುತ್ತವೆ. ಅಂತಹ ನಿಮ್ಮಿಷ್ಟದ ಪ್ರಾಣಿ, ಪಕ್ಷಿಗಳನ್ನು ಸಾಕಿರಿ. ಅವುಗಳೊಂದಿಗೆ ಕಾಲ ಕಳೆಯಿರಿ ಮನುಷ್ಯರ ಸಂಘವೇ ಬೇಡವೆನ್ನಿಸುತ್ತದೆ.
ಸಾಮಾಜಿಕ ಜಾಲತಾಣಕ್ಕೆ ಅಂತ್ಯ ಹಾಡಿ:
ಭಾರತೀಯ ಒಂದು ಸರ್ವೆ ಪ್ರಕಾರ ಅತೀಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಬೇಗನೇ ಒಂಟಿತನದ ಗೀಳಿಗೆ ಬೀಳುತ್ತಾರೆ. ಏಕೆಂದರೆ ಮತ್ತೊಬ್ಬರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಅತಿಯಾಗುತ್ತದೆ. ಉದಾಹರಣೆಗೆ ತನ್ನ ಗೆಳೆಯ/ಗೆಳತಿಗೆ ಫೇಸ್ಬುಕ್ನಲ್ಲಿ ಸಾವಿರಾರು ಜನ ಫ್ರೆಂಡ್ಸ್ ಇದ್ದಾರೆ. ನೂರಾರು ಜನರ ಲೈಕ್ಸ್ ಕಮೆಂಟ್ ಬರುತ್ತದೆ. ಹುಟ್ಟುಹಬ್ಬಕ್ಕೆ ಎಷ್ಟೊಂದು ಜನ ಅವನ/ಅವಳ ಪೋಟೊಗಳನ್ನು ಸ್ಟೇಟಸ್ಸ್ ಹಾಕುತ್ತಾರೆ. ಆದರೆ ನನಗೆ ಆ ತರಹದ ಫ್ರೆಂಡ್ಸ್ ಯಾರು ಇಲ್ಲ. ಮೇಸೆಜ್ ಮಾಡುವವರಿಲ್ಲ. ಈ ರೀತಿಯ ಪರಕೀಯ ಪ್ರಜ್ಞೆ ನಮ್ಮೊಳಗೆ ಬೆಳೆಯ ತೊಡಗುತ್ತದೆ. ಒಂಟಿತನ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಮೊದಲು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆಮಾಡಿ.
ಡೈರಿ ಬರೆಯುತ್ತೀರಾ?
ಮನಸ್ಸಿನ ತುಂಬಾ ಭಾವನೆಗಳ ಗೊಪುರ ಅಡ್ಡಡ್ಡ ಉದ್ದೂದ್ದ ಮಲಗಿರುತ್ತವೆ. ಆದರೆ ನಿಸ್ಸಂಕೊಚವಾಗಿ ಹೇಳಿಕೊಳ್ಳುವುದಕ್ಕೆ ಯಾರು ಆಪ್ತರಿರುವುದಿಲ್ಲ. ಆಗಲೇ ಒಂಟಿತನ ಅತಿಯಾಗುವುದು. ನಿಮ್ಮಿಷ್ಟದ ಒಂದು ಡೈರಿ ತೆಗೆದುಕೊಳ್ಳಿ. ಅದನ್ನು ಇಷ್ಟ ಬಂದತೆ ಸಿಂಗರಿಸಿ, ದಿನ ರಾತ್ರಿ ಮಲಗುವ ಮೊದಲು ಒಂದಿಷ್ಟು ಸಮಯ ಅದಕ್ಕಾಗಿ ಮೀಸಲಿಡಿ. ಯಾವ ಮುಚ್ಚುಮರೆ ಇಲ್ಲದೇ ದಿನವೂ ನಿಮ್ಮ ಮನಸ್ಸಿನ ತೊಳಲಾಟಗಳನ್ನು ನಿಸ್ಸಂಕೊಚವಾಗಿ ಅದರಲ್ಲಿ ಬರೆಯಿರಿ. ತಿಂಗಳ ನಂತರ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ. ಎಷ್ಟೊಂದು ನಿರಾಳರಾಗಿರುವಿರೆಂದು. ಹೊಸ ವಿಚಾರಗಳಿಗೆ ಎಷ್ಟೊಂದು ಜಾಗಮಾಡಿ ಕೊಟ್ಟಿದ್ದಿರೆಂದು.
ಕುಟುಂಬದೊಂದಿಗೆ ಕಳೆಯೋಣ:
ಮನೆಯಲ್ಲಿ ನಮ್ಮದೇ ಒಂದು ಕೋಣೆಯಿರುತ್ತದೆ. ದಿನದ ಮುಕ್ಕಾಲು ಭಾಗವನ್ನು ಅಲ್ಲಿಯೇ ಕಳೆದು ಬಿಡುತ್ತೇವೆ. ಕೋಣೆ ಒಳಕ್ಕೆ ಹೋದರೆ ಮುಗಿಯಿತು, ಬದುಕೆ ಯಾಂತ್ರಿಕವಾಗುತ್ತದೆ. ಇಯರ್ಫೋನ್ ಹಾಕಿ ಹಾಡ ಕೇಳುತ್ತಾ ಕಂಪ್ಯೂಟರ್ ಮುಂದೆ ಕುಳಿತರೆ ಪಕ್ಕಕ್ಕೆ ಪ್ರಳಯವಾದರೂ ಗೊತ್ತಾಗುವುದಿಲ್ಲಾ. ಊಟಕ್ಕೆ, ತಿಂಡಿಗೆ 10 ಸಾರಿ ಕೂಗಿದ ಮೇಲೆ ಹೊಟ್ಟೆತುಂಬಿಸಿ ಕೊಂಡು ಹೋಗುತ್ತೇವೆ. ಮೊದಲು ಪ್ರಾಣಿ ಗುಹೆಯಂತಹ ಕೋಣೆಯನ್ನು ಬಿಟ್ಟು ಬನ್ನಿ. ನಮ್ಮ ಖುಷಿಗಾಗಿ ತಮ್ಮ ಖುಷಿ ಮರೆತ ಮನೆಯವರಿಗಾಗಿ ಸಮಯ ಕೊಡಿ. ಅವರ ಕೆಲಸದಲ್ಲಿ ಬಾಗಿಯಾಗಿರಿ. ಆಗ ಹೊಸ ಖುಷಿ ನಿಮ್ಮದಾಗುತ್ತದೆ.
ಊರ ಮಕ್ಕಳೊಂದಿಗೆ ಆಟವಾಡೋಣ:
ಹೈಸ್ಕೂಲಿನಲ್ಲಿ ಕೊನೆಯ ಬಾರಿ ಗ್ರೌಂಡ್ಗಿಳಿದ ನೆನಪು. ನಂತರ ಎಲ್ಲವೂ ಮೊಬೈಲ್ನಲ್ಲಿ ಆಡಿದ್ದು. ಕ್ರಿಕೆಟ್, ಚೆಸ್ಸ್, ಕೆರಮ್ ಇತ್ಯಾದಿ ಮೊಬೈಲ್ ಗೇಮ್ಗಳು ನಮ್ಮನ್ನು ಒಂಟಿಯಾಗಿಸುತ್ತದೆ. ಒಂದಿಷ್ಟು ಸಮಯ ಮಾಡಿಕೊಂಡು ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿ. ದೇಹ ದಣಿದರೆ ಮನಸ್ಸಿನ ಬೇಸರ ದೂರವಾಗುತ್ತದೆ.