Wednesday, July 6, 2022

Latest Posts

ಒಳಚರಂಡಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಶಾಸಕ ಸೋಮಶೇಖರ್ ರೆಡ್ಡಿ ಸ್ಪಂದನೆ

ಹೊಸದಿಗಂತ ವರದಿ, ಬಳ್ಳಾರಿ:

ಒಳಚರಂಡಿ ಕಾರ್ಮಿಕರು‌ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಕೆಲದಿನಗಳಿಂದ ಮಹಾನಗರ ಪಾಲಿಕೆ‌ ಎದುರು ನಡೆಸುತ್ತಿದ್ದ ಪ್ರತಿಭಟನೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರ ಮಧ್ಯಪ್ರವೇಶ ಹಾಗೂ ಭರವಸೆಯಿಂದ ಧರಣಿ ಶನಿವಾರ ಅಂತ್ಯವಾಗಿದೆ.
ಒಳಚರಂಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಕೆಗೆ ಸಂಬಂಧಿಸಿದಂತೆ ಸಕರಾತ್ಮಕವಾಗಿ ಸ್ಪಂದಿಸಲಾಗಿದ್ದು, ಬೇಡಿಕೆಗಳು‌ ಮತ್ತು ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದರಿಂದ ಧರಣಿ ಅಂತ್ಯಗೊಳಿಸಿದ್ದಾರೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಅವರು ತಿಳಿಸಿದ್ದಾರೆ.
ಒಳಚರಂಡಿ ಕಾರ್ಮಿಕರನ್ನು ಖಾಯಂಗೊಳಿಸಬೇಕು.ಗುತ್ತಿಗೆ ಪದ್ಧತಿ ರದ್ದು ಪಡಿಸಬೇಕು. ಸಮಾನಕೆಲಸಕ್ಕೆ ಸಮಾನವೇತನವನ್ನು ನೀಡಬೇಕು.ಬೆಳಗಿನ ಉಪಹಾರ ಭತ್ಯೆ ನೀಡಬೇಕು. ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು.ಮಹಾನಗರ ಪಾಲಿಕೆ ವತಿಯಿಂದ ಗುರುತಿನ ಚೀಟಿಗಳು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಶಾಸಕ ಸೋಮಶೇಖರ್ ರೆಡ್ಡಿ ಅವರು ಶನಿವಾರ ಒಳಚರಂಡಿ ಕಾರ್ಮಿಕರ ಮುಖಂಡರು ಹಾಗೂ ಕಾರ್ಮಿಕ ಪ್ರಮುಖರನ್ನು ಕರೆದು ಮಾತನಾಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ತಾತ್ಕಲಿಕವಾಗಿ ಅನಿರ್ಧಿಷ್ಟಾವಧಿ ಧರಣಿಯನ್ನು ಕೈಬಿಟ್ಟಿದ್ದಾರೆ. ಬೇಡಿಕೆಗಳು ಈಡೇರದಿದ್ದರೆ ಮತ್ತೆ ನಮ್ಮ ಹೋರಾಟ ಅನಿವಾರ್ಯ ಎಂದು ಕಾರ್ಮಿಕರು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss