ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಯ ನ್ಯಾಶನಲ್ ಟ್ರೈನಿಂಗ್ ಸೆಂಟರ್ ಫಾರ್ ಡಾಗ್(ಎನ್ಟಿಸಿಡಿ)ನಲ್ಲಿ ಎರಡು ತಿಂಗಳ ಹಿಂದೆ ಜನಿಸಿದ , ಕುಖ್ಯಾತ ಒಸಾಮ ಬಿನ್ ಲಡೇನ್ ಹಂತಕ ಶ್ವಾನಗಳೆಂದೇ ಖ್ಯಾತ, ಹದಿನೇಳು ಬೆಲ್ಜಿಯನ್ ಮಲಿನಾಯ್ಸ್ ನಾಯಿಮರಿಗಳಿಗೆ ಈ ಬಾರಿ ಅಪ್ಪಟ ‘ದೇಶೀ’ ಹೆಸರಿಡಲಾಗಿದೆ. ಮುಖ್ಯವಾಗಿ ಲಡಾಖ್ ವಲಯದ ನಿರ್ಣಾಯಕ ಭೌಗೋಳಿಕ ನೆಲೆಗಳಾಗಿರುವ ಗ್ಯಾಲ್ವಾನ್, ಶಯ್ಯೋಕ್, ರಿಝಾಂಗ್, ರಂಗೋ, ಸುಲ್ತಾನ್ ಛುಕ್ಷು, ಐಮಿಸ್, ಚಾರ್ದಿಂಗ್, ಅನೆ-ಲಾ, ಸಸೋಮ, ಚಾಂಗ್ ಚೆನ್ಮೋ, ಚಿಪ್-ಚ್ಯಾಪ್ ಇತ್ಯಾದಿ ನಾಮಕರಣ ಮಾಡಲಾಗಿದೆ. ಇವೆಲ್ಲವೂ ಲಡಾಖ್ ವಲಯದಲ್ಲಿನ ವ್ಯೂಹಾತ್ಮಕ ನೆಲೆಗಳು. ಚೀನಾದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಕಾವಲು ಕಾಯಲು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು ಇದೇ ವಲಯದಲ್ಲಿ ಎಂದು ಹಿರಿಯ ಅಧಿ ಕಾರಿಯೋರ್ವರು ಹೇಳುತ್ತಾರೆ.
ಪೊಲೀಸ್ ಮತ್ತು ಸೇನಾಪಡೆ ಬಳಸುವ ಶ್ವಾನಗಳಿಗೆ ಪಾಶ್ಚಾತ್ಯ ಹೆಸರನ್ನಿಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡುವುದು ಮತ್ತು ಅಹೋರಾತ್ರಿ ಅತ್ಯಂತ ದುರ್ಗಮ ಪರ್ವತ ಶ್ರೇಣಿಗಳ ತುತ್ತ ತುದಿಯಲ್ಲೂ ಕಾವಲು ಕಾಯುವ ಭಾರತೀಯ ಯೋಧರ ಗೌರವಾರ್ಥ, ಯೋಧರು ಕರ್ತವ್ಯದಲ್ಲಿರುವ ಪ್ರದೇಶಗಳ ಹೆಸರನ್ನೇ ಬೆಲ್ಜಿಯನ್ ನಾಯಿಮರಿಗಳಿಗೆ ಇಡಲು ಮುಂದಾಗಿದ್ದೇವೆ. ಗಡಿ ಭದ್ರತಾ ಪಡೆಯ ಅಂಗವಾಗಿರುವ ಶ್ವಾನ ಪಡೆಯ ನಾಯಿಮರಿಗಳಿಗೆ ಶೇ.೧೦೦ರಷ್ಟು ದೇಶೀ ಹೆಸರಿಡೋ ಮೂಲಕ ಪಡೆಯು ತನ್ನದೇ ಆದ ಪರಂಪರೆ-ಭಾವನೆಗಳನ್ನು ಜತನದಿಂದ ಕಾಯ್ದುಕೊಂಡಿದೆ ಎಂದು ಅಕಾರಿ ವಿಶ್ಲೇಷಿಸಿದ್ದಾರೆ. ಮುಂದೆ ಜನಿಸುವ ನಾಯಿಮರಿಗಳಿಗೆ ಅರುಣಾಚಲ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಗಡಿ ನೆಲೆ, ವಲಯಗಳ ಹೆಸರಿಡಲಾಗುವುದು ಎಂದಿದ್ದಾರೆ.
ಬೆಲ್ಜಿಯನ್ ಮಲಿನಾಯ್ಸ್ ತಳಿಯ ಸೋದರಿ ನಾಯಿಗಳಾದ ಐದು ವರ್ಷ ಪ್ರಾಯದ ಓಲ್ಗಾ ಮತ್ತು ಒಲೇಶ್ಯಾಗಳು ಈ ಮರಿಗಳಿಗೆ ಜನ್ಮವಿತ್ತಿದ್ದು, ಇವುಗಳ ಜನ್ಮದಾತನ ಹೆಸರು ಗಾಲಾ ಎಂದಾಗಿದೆ. ಸೇನಾಪಡೆ ಇಷ್ಟೊಂದು ಅಪಾರ ಸಂಖ್ಯೆಯ ನಾಯಿಮರಿಗಳನ್ನು ಏಕಕಾಲಕ್ಕೆ ಹೊಂದುತ್ತಿರುವುದು ಇದೇ ಪ್ರಥಮ.
ಒಸಾಮನ ಅಂತ್ಯಕ್ಕೆ ಕಾರಣ!
ಪಾಕಿಸ್ಥಾನದಲ್ಲಿ ಅಡಗಿದ್ದ ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಡೇನ್ ವಿರುದ್ಧ ೨೦೧೧ರಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸುವಲ್ಲಿ ಅಮೆರಿಕದ ನೌಕಾ ಪಡೆಯ ವಿಶೇಷ ತಂಡಕ್ಕೆ ನೆರವಾದ್ದು ಇದೇ ಬೆಲ್ಜಿಯನ್ ನಾಯಿಗಳು. ಇವು ವಿಶ್ವವಿಖ್ಯಾತವಾದ್ದು ಕೂಡ ಲಡೇನ್ ದಮನ ಕಾರ್ಯಾಚರಣೆಯ ನಂತರ.
ಭಾರತದಲ್ಲಿ ದಶಕ ಹಿಂದೆ ಸೇನಾಪಡೆಗೆ ಸೇರ್ಪಡೆಯಾದ ಬೆಲ್ಜಿಯನ್ ಶ್ವಾನಗಳು ಸ್ವಭಾವತ: ಕ್ರೂರವಾಗಿರುವ ಕಾರಣ, ಮುಖ್ಯವಾಗಿ ಕೇಂದ್ರ ಭದ್ರತಾ ಪಡೆ ಮತ್ತು ಪೊಲೀಸರು ನಕ್ಸಲ್ ನಿಗ್ರಹ ಕಾರ್ಯಾಚರಣೆ , ಉಗ್ರ ವಿರೋಧಿ ಕಾರ್ಯಾಚರಣೆಗೆ ಇವನ್ನೇ ಬಳಸುತ್ತಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಂತು ಓಲ್ಗಾ, ಒಲೇಶ್ಯಾ ಮತ್ತು ಗಾಲಾ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸಿದ್ದವೆಂದು ಅಧಿಕಾರಿ ನೆನಪಿಸುತ್ತಾರೆ. ಇತರ ಆಂತರಿಕ ಭದ್ರತಾ ಡ್ಯೂಟಿಯನ್ನೂ ಇವು ಬಹಳ ನಿಷ್ಠೆಯಿಂದ ಮಾಡುತ್ತವೆ.
ಸದ್ಯ ಈ ೧೭ ನಾಯಿಮರಿಗಳಿಗೆ ಚಂಡೀಗಢದಲ್ಲಿನ ಅಕಾಡೆಮಿಯಲ್ಲಿ ಕಾಲಾಳು ಗಸ್ತು, ಭಯೋತ್ಪಾದನೆ ವಿರೋ ಕಾರ್ಯಾಚರಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸೇನಾಪಡೆಯ ಶ್ವಾನಗಳಿಗೆ ಹಿಂದೆಲ್ಲ ಸೀಝರ್, ಎಲಿಜಬೆತ್ ಎಂಬಿತ್ಯಾದಿಯಾಗಿ ಪಾಶ್ಚಾತ್ಯ ಹೆಸರನ್ನೇ ಇಡಲಾಗುತ್ತಿತ್ತು.