ಹೊಸದಿಲ್ಲಿ :ಕೊರೋನಾ ಹೆಮ್ಮಾರಿಯ ದೆಸೆಯಿಂದ ಜಾರಿಗೊಳಿಸಲಾದ ಲಾಕ್ಡೌನ್ನ ಕಾರಣ ತಮ್ಮ ಬೆಳೆಯನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಿಸಲಾಗದ ರೈತರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈತರಿಗೆ ತಮ್ಮ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು ‘ಕಿಸಾನ್ ರಥ’ ರೈತನ ಬಳಿಗೆ ತೆರಳಲಿದೆ. ಇದು ಇಂದು ಜನರು ತಮ್ಮ ಪ್ರಯಾಣಕ್ಕೆ ಬುಕ್ ಮಾಡುತ್ತಿರುವ ಓಲಾ-ಉಬರ್ ಮಾದರಿಯಲ್ಲಿರುತ್ತದೆ.
ಕೇಂದ್ರ ಕೃಷಿ ಸಚಿವಾಲಯದ ಮುತುವರ್ಜಿಯೊಂದಿಗೆ ನ್ಯಾಷನಲ್ ಇನ್ ಫಾರ್ಮಟಿಕ್ಸ್ ಸೆಂಟರ್ ರೂಪಿಸಿದ ಆಪ್ ಇದಾಗಿದ್ದು, ಇದು ಕೃಷಿಕರು ತಮ್ಮ ಉತ್ಪನ್ನಗಳ ಸಾಗಣೆಗೆ ಬಳಸಿಕೊಳ್ಳಬಹುದಾಗಿದೆ.ಇದು ಎಂಟು ಭಾಷೆಗಳಲ್ಲಿ ಕಾರ್ಯಾಚರಿಸಲಿದ್ದು, ರೈತರು ತಾವು ಸಾಗಣೆ ಮಾಡಲು ಬಯಸುವ ಉತ್ಪನ್ನಗಳ ಪ್ರಮಾಣದ ಬಗ್ಗೆ ಮುಂಚಿತವಾಗಿ ತಿಳಿಸಬೇಕು.ಈ ಮಾಹಿತಿಯನ್ನು ಮಂಡಿಗಳಲ್ಲಿನ ವ್ಯಾಪಾರಿಗಳು ಮತ್ತು ಸಾಗಣೆದಾರರಿಗೆ ರವಾನಿಸಲಾಗುತ್ತದೆ. ಅವರು ದೂರವಾಣಿ ಮೂಲಕ ರೈತರನ್ನು ಸಂಪರ್ಕಿಸಿ ಬಾಡಿಗೆ ದರ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ. ಈ ಮೂಲಕ ಮಂಡಿಗಳು, ಎಪಿಎಂಸಿ, ವ್ಯಾಪಾರಿಗಳು ರೈತರಿಂದ ಕೃಷಿ ಉತ್ಪನ್ನಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಹಾಗೆಯೇ ರೈತರಿಗೆ ಗೋದಾಮುಗಳಿಗೆ ತಮ್ಮ ಉತ್ಪನ್ನಗಳನ್ನು ಒಯ್ಯಲೂ ‘ಕಿಸಾನ್ ರಥ ’ ನೆರವಾಗಲಿದೆ.
ಈ ‘ಕಿಸಾನ್ ರಥ ’ಯೋಜನೆಗಾಗಿ ೫ಲಕ್ಷಕ್ಕೂ ಹೆಚ್ಚು ಲಾರಿಗಳನ್ನು ಮತ್ತು ೨೦ಸಾವಿರಕ್ಕೂ ಅಕ ಟ್ರ್ಯಾಕ್ಟರ್ಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ .ಪ್ರಾಯಶಃ ಮುಂದಿನ ದಿನಗಳಲ್ಲಿ ಈ ‘ಕಿಸಾನ್ ರಥ ’ಯೋಜನೆ ರೈತರ ಪಾಲಿಗೆ ವರದಾನವಾಗಲಿದ್ದು, ಇದು ದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಣ ಅಂತರ ನೀಗಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸುವಂತಾಗಲೂ ಸಹಾಯವಾಗಬಹುದಾಗಿದೆ .