ಹೊಸ ದಿಗಂತ ಆನ್ಲೈನ್ ಡೆಸ್ಕ್:
ಬಾಯಿಹುಣ್ಣಿಗೆ ದಿನಾ ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲು ಹುಲ್ಲಿಗೆ ಸಿಂಪಡಿಸುವ ಕಳೆ ನಾಶಕ ಔಷಧ ತಪ್ಪಾಗಿ ಸೇವಿಸಿದ್ದ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯ, ಹಾಲಿ ಅಭ್ಯರ್ಥಿ ಅರ್ಗತ್ಯಾರು ನಿವಾಸಿ ಜಯಂತ ಪ್ರಭು (58) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ.
ಇವರು ತನ್ನ ಬಾಯಿ ಹುಣ್ಣಿಗೆ ದಿನಾ ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲಾಗಿ ಖಾಲಿಯಾಗಿದ್ದ ಔಷಧಿ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ‘ಟ್ರೈ ಕಾಟ್’ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆ ನಾಶಕ ಔಷಧಿಯನ್ನು ಡಿ. 21 ರಂದು ರಾತ್ರಿ 11 ಗಂಟೆಯ ವೇಳೆ ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದರು.
ಈ ನಡುವೆ ಮರುದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೇ ಒಂದಷ್ಟು ಹೊತ್ತು ಕಳಿತು ಕೊನೇ ಕ್ಷಣದ ಮತದಾರನ ಮನವೊಲಿಸುವಲ್ಲೂ ತೊಡಗಿದ್ದರು. ಅದಾಗಿ ರಾತ್ರಿ ವೇಳೆಗೆ ಹಠಾತ್ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಅವರ ಪುತ್ರ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಅಭ್ಯರ್ಥಿಯಾಗಿದ್ದರು
ಜಯಂತ ಪ್ರಭು ಡಿ.22 ರಂದು ನಡೆದ ಗ್ರಾಪಂ ಚುನಾವಣೆಗೆ ಕಾವಳಮೂಡೂರು ಪಂಚಾಯತ್ನ ವಾರ್ಡ್ವೊಂದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಇವರು ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದು, ಒಂದು ಬಾರಿ ಗ್ರಾಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಅಂತಿಮ ನಮನ
ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಜಿ.ಪಂ. ಸದಸ್ಯ ಪದ್ಮಶೇಖರ ಜೈನ್ ಮೊದಲಾದವರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.