ಹೊಸ ದಿಗಂತ ಆನ್ಲೈನ್ ಡೆಸ್ಕ್:
ಶಾಂತವಾಗಿರುವ ಕಡಲತಡಿ ಮಂಗಳೂರಿನಲ್ಲಿ ಲಷ್ಕರ್ ಏ ತೈಯ್ಬಾ ಬೆಂಬಲಿಸಿ ಗೋಡೆ ಬರಹ ಪ್ರದರ್ಶಿಸುವ ಮೂಲಕ ಆತಂಕ ಸೃಷ್ಟಿಸಿದ ಘಟನೆಯ ವಿರುದ್ಧ ಆಕ ವ್ಯಕ್ತಪಡಿಸಿರುವ ಹಿಂದೂ ಜಾಗರಣಾ ವೇದಿಕೆ, ಕಿಡಿಗೇಡಿಗಳನ್ನು ಹಾಗೂ ಅದಕ್ಕೆ ಬೆಂಬಲಿಸುವವರನ್ನು ಬೇರು ಸಹಿತ ಕಿತ್ತು ಮಟ್ಟಹಾಕಲು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಇತ್ತೀಚೆಗೆ ಮಂಗಳೂರಿನ ಪೋಲೀಸ್ ಅಧಿಕಾರಿಗಳ ಕಾರ್ಯಾಚರಣೆಯಿಂದ ಸಾಮಾಜಿಕ ಜಾಲತಾಣದಲ್ಲಿನ ಕೋಮುದ್ವೇಷ ಹರಡಿಸುವ ಪೇಜುಗಳನ್ನು ಮಟ್ಟಹಾಕಲಾಗಿದೆ. ಅದಾದ ಬಳಿಕ ಕೆಲವು ಖಡಕ್ ಅಧಿಕಾರಿಗಳ ವರ್ಗಾವಣೆ ಕೂಡಾ ಆಗಿದೆ. ಅದರ ಪ್ರತಿಫಲನ ಗೋಡೆಬರಹದ ಮೂಲಕ ಕಾಣಿಸಿದೆಯಾ ಎಂಬ ಶಂಕೆ ವ್ಯಕ್ತಪಡಿಸಿರುವ ವೇದಿಕೆ, ಕದ್ರಿ ಪೋಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಈ ಬೆಳವಣಿಗೆ ಕಾಣಿಸಿಕೊಂಡಿರುವುದು ನಗರದ ಭದ್ರತೆಗೆ ಸವಾಲು ಎಸೆದಂತಾಗಿದೆ.
ಹೀಗಾಗಿ ತಕ್ಷಣ ದಕ್ಷ ಪೋಲೀಸ್ ಅಧಿಕಾರಿಗಳನ್ನು ನೇಮಿಸುವ ಮೂಲಕ ಭಯೋತ್ಪಾದಕರನ್ನು ಬೆಂಬಲಿಸುವ ಮನಸ್ಥಿತಿ ಹೊಂದಿರುವವರನ್ನು ಮತ್ತು ಅದಕ್ಕೆ ಬೆಂಬಲಿಸುವವರನ್ನು ಬೇರು ಸಮೇತ ಕಿತ್ತು ಮಟ್ಟಹಾಕುವಂತೆ ಪೋಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ವೇದಿಕೆ ಆಗ್ರಹಿಸಿದೆ.