ಕಡಲ್ಕೊರೆತಕ್ಕೆ ಬ್ರೇಕ್ ಹಾಕಲು ಸಾಗಿದೆ ಇಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ: ಲಾಕ್ ಡೌನ್ ನಡುವೆ ಹೀಗೊಂದು ಶ್ರಮದಾನ!

0
160

ಮಂಗಳೂರು: ಕೊರೋನಾ ಆರ್ಭಟದ ನಡುವೆಯೇ ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲ ಆರಂಭವಾಯಿತೆಂದರೆ ಕೇಳುವುದೇ ಬೇಡ, ಕಡಲ್ಕೊರೆತದ ಭೀತಿ ಕಡಲ ತೀರದ ಜನತೆಯನ್ನು ಇನ್ನಿಲ್ಲದೆ ಕಾಡುತ್ತದೆ. ಈ ಭಾರಿಯೂ ಕಡಲ್ಕೊರೆತದ ಭೀತಿ ಇರುವುದರಿಂದ ಇಲ್ಲಿನ ನಾಲ್ಕು ಪಟ್ಣ ಮೊಗವೀರ ಸಭಾದ ಸದಸ್ಯರು ಒಂದುಗೂಡಿ ಕಡಲ್ಕೊರೆತಕ್ಕೆ ಬ್ರೇಕ್ ಹಾಕಲು ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪಣಂಬೂರು, ಕುಳಾಯಿ, ತಣ್ಣೀರುಬಾವಿ, ಮತ್ತು ಕೋಡಿಕಲ್ ಈ ನಾಲ್ಕು ಗ್ರಾಮಗಳನ್ನೊಳಗೊಂಡ ನಾಲ್ಕುಪಟ್ಣ ಮೊಗವೀರ ಸಭಾದ ಸದಸ್ಯರು ಕಡಲ್ಕೊರೆತವಾಗುವ ಪ್ರದೇಶದಲ್ಲಿ ತಾತ್ಕಾಲಿಕ  ತಡೆಗೋಡೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಒಂದೆಡೆ ಕೊರೋನಾ ಮಹಾಮಾರಿ ಕಂಟಕವಾಗಿ ಪರಿಣಮಿಸಿದೆ. ಲಾಕ್‌ಡೌನ್‌ನಿಂದಾಗಿ ಸರಿಯಾಗಿ ಉದ್ಯೋಗವೂ ಇಲ್ಲ. ಮೀನುಗಾರಿಕೆಯೂ ಸರಿಯಾಗಿ ನಡೆಯುತ್ತಿಲ್ಲ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಮೀನುಗಾರ ಸಮುದಾಯದ ಮಂದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಕಡಲ ತೀರದ ಮರಳನ್ನು ಗೋಣಿಯಲ್ಲಿ ತುಂಬಿಸಿ ಕಡಲ್ಕೊರೆತವಾಗುವ ಸ್ಥಳದಲ್ಲಿ ರಾಶಿ ಹಾಕುವ ಮೂಲಕ ತಾತ್ಕಾಲಿಕ ಬ್ರೇಕ್ ಹಾಕುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
ಸಚಿವರಿಗೆ ಮನವಿ ನೀಡಿದ್ದೇವೆ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ, ಪ್ರತಿ ಮಳೆಗಾಲದಲ್ಲಿ ಸಮುದ್ರ ಕೊರೆತ ಕಡಲ ತೀರದ ಜನತೆಯನ್ನು ಕಾಡಲಾರಂಭಿಸುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಆಗಲೇಬೇಕು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮತ್ತು ಶಾಸಕರ ಗಮನಕ್ಕೆ ತರಲಾಗಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಆಗಲೇಬೇಕು. ಈ ಮಳೆಗಾಲದಲ್ಲೂ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ತಡೆಗೋಡೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ. ಸ್ಥಳೀಯರೂ ಸಹಕಾರ ನೀಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.
ನಾಲ್ಕು ಪಟ್ಣ ಸಂಯುಕ್ತ ಸಭಾ, ಮೊಗವೀರ ಹೆಲ್ಪ್ ಲೈನ್, ವೀರ ಮಾರುತಿ ವ್ಯಾಯಾಮಶಾಲೆ, ಮಹಾವಿಷ್ಣು ಭಜನಾ ಮಂದಿರ, ಮೊಗವೀರ ಮಹಿಳಾ ಮಂಡಳಿಯವರು ಸೇರಿದಂತೆ ಹಲವು ಮಂದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಾಥ್ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here