Thursday, August 11, 2022

Latest Posts

ಕತಾರ್-ದೋಹಾದಿಂದ ಮಂಗಳೂರಿಗೆ ಬಂತು ಪ್ರಥಮ ವಿಮಾನ!

ಮಂಗಳೂರು: ವಂದೇ ಭಾರತ ನಿಯೋಗದ ನಿರಂತರ ಶ್ರಮದಿಂದಾಗಿ ಕತಾರ್ ದೇಶದ ರಾಜಧಾನಿ ದೋಹಾದಿಂದ ಮಂಗಳೂರಿಗೆ ಐದು ಪುಟ್ಟ ಕಂದಮ್ಮಗಳು ಹಾಗೂ 180 ಮಂದಿ ಪ್ರಯಾಣಿಕರನ್ನು ಹೊತ್ತ ಪ್ರಥಮ ವಿಮಾನ ಶುಕ್ರವಾರ ಆಗಮಿಸಿದೆ.
ಇಂಡಿಯನ್ ಏರ್‌ಲೈನ್ಸ್ ವಿಮಾನ ಸಂಖ್ಯೆ ಐಎಕ್ಸ್-1822 ಕತಾರಿನ ಹಮಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ೧೨ಗಂಟೆಗೆ ಹೊರಟ ವಿಮಾನ ಸಂಜೆ 6.35 ರ ಸುಮಾರಿಗೆ ಮಂಗಳೂರು ತಲುಪಿದೆ.
ಈ ವಿಮಾನ ಸೇವೆಗೆ ಹಲವರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ನಿರಾಶ್ರಿತರ ಸೇವೆಗೆಂದೇ ಕೇಂದ್ರ ಹಾಗು ರಾಜ್ಯ ಸರಕಾರಗಳ ಮಂತ್ರಾಲಯಗಳಿಗೆ ಪತ್ರ ಬರೆದು, ಪದೇ ಪದೇ ಕರೆ ನೀಡಿ, ಸಕಾರಾತ್ಮಕ ಫಲಿತಾಂಶ ಸಿಗುವ ತನಕ ಬೆಂಬಿಡದೆ ಓಡಾಡಿದ್ದಾರೆ. ಈ ಪೈಕಿ ಕತಾರಿನ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐಸಿಬಿಎಫ್)ನ ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು ಅವರು.
ಬಂದ ವಿಮಾನದಲ್ಲಿ ದ.ಕ.ದ 140, ಉಡುಪಿಯ 35 ಹಾಗೂ ಉತ್ತರ ಕನ್ನಡ ಮತ್ತು ಮೈಸೂರು ಹಾಗೂ ಚಿಕ್ಕಮಗಳೂರಿನ ಪ್ರಯಾಣಿಕರಿದ್ದಾರೆ. ಇವರಲ್ಲಿ 15 ಮಂದಿ ಗರ್ಭಿಣಿಯರು, ಮಹಿಳೆಯರು, ಅಶಕ್ತರು, ಅನಾರೋಗ್ಯ ಪೀಡಿತರು ಸೇರಿದ್ದಾರೆ. ಉಡುಪಿ ಮತ್ತು ಉತ್ತರ ಕನ್ನಡ ಹೊರತುಪಡಿಸಿ ಉಳಿದ ಎಲ್ಲರನ್ನು ಶುಕ್ರವಾರ ರಾತ್ರಿಯೇ ಮಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕತಾರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಮೃತಪಟ್ಟ ಮಂಗಳೂರಿನ ಪುಂಜಾಲಕಟ್ಟೆ ನಿವಾಸಿ ಅಶೋಕ್ ಥಾಮಸ್ ಡಿಸೋಜಾ(34) ಅವರ ಮೃತ ಶರೀರವನ್ನೂ ತರಲಾಗಿದೆ.
ಈ ವಿಶೇಷ ವಿಮಾನ ಕಾರ್ಯಾಚರಣೆ ಹಿಂದೆ ಅಲ್ಲಿನ ಅನಿವಾಸಿ ಭಾರತೀಯರಾದ ಐಸಿಬಿಎಫ್ ಜಂಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷ ಮಹೇಶ್ ಗೌಡ, ಕತಾರ್ ಕನ್ನಡ ಸಂಘ ಅಧ್ಯಕ್ಷ ನಾಗೇಶ್ ರಾವ್ ಮತ್ತಿತರರು ಶ್ರಮಿಸಿದ್ದಾರೆ.
ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ನೀಡುವುದರೊಂದಿಗೆ ಮಾಸ್ಕ್, ಕೈಗವಸು, ಸ್ಯಾನಿಟೈಸರ್ ವ್ಯವಸ್ಥೆಯೊಂದಿಗೆ ಎಲ್ಲರನ್ನು ಮುಂಜಾಗೃತಾ ಕ್ರಮಗಳೊಂದಿಗೆ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ. ವಾರದ ಹಿಂದೆ ಬೆಂಗಳೂರಿಗೂ ಎರಡು ವಿಮಾನವನ್ನು ಕಳುಹಿಸಿಕೊಡಲಾಗಿತ್ತು ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss