Sunday, July 3, 2022

Latest Posts

 ಕಥೆಗಾರ ಕ್ಷಮೆ ಕೇಳಿದ ಕಥೆ

ಪ್ರಿಯ ಓದುಗನೆ, ನಮಸ್ಕಾರ. ಕಲ್ಲುಸಕ್ಕರೆಯಂತಹ ನಿನ್ನೆದೆಯನ್ನು ಕರಗಿಸಿ ಅದರ ಸವಿಯನ್ನು ಮೊದಲಿನಿಂದಲೂ ನೀನು ಹಣಿಸುತ್ತ ಬಂದಿರುವೆ. ಮಿಡಿಯುವ ಹೃದಯಗಳಿಲ್ಲದಿದ್ದರೆ, ಲಂಬಿಸಲಾಗದ ತಂತಿಗಳಿಲ್ಲದಿದ್ದರೆ ಯಾರಾದರೂ ಬರೆಯಬೇಕಾದ ಪ್ರಸಂಗವೆ ಬರುತ್ತಿರಲಿಲ್ಲ. ಕಿಂಗ್ ಲಿಯರ್ ನಾಟಕದಲ್ಲಿ ಮಗಳ ಬಗ್ಗೆ ಅಷ್ಟು ಕಠೋರನಾದ ಲಿಯರ್ ಅವಳು ಸತ್ತ ಮೇಲೆ ಪಶ್ಚಾತ್ತಾಪಪಡುವ ಪರಿ ಹೃದಯವಿದ್ರಾವಕವಾದುದು. ನಾನು ಯಾವಾಗಲೂ ಸಂಘರ್ಷ-ಸಾವುಗಳ ಕಥೆಗಳನ್ನು ಬರೆಯುತ್ತೇನೆಂದು ನೀನು ಒಮ್ಮೆ ಹೇಳಿದ್ದು ನೆನಪಾಗುತ್ತದೆ. ಸುತ್ತಲೂ ಇಷ್ಟೊಂದು ದುಃಖ ಇರುವಾಗ ಯಾವ ಹುರುಪು ಹುಮ್ಮಸ್ಸಿನಿಂದ ನಾನು ನನ್ನ ಬರವಣಿಗೆಯನ್ನು ಸಂಭ್ರಮಿಸಲಿ ಹೇಳು? ನನ್ನ ಹಳ್ಳಿಯ ಚಲನೆಯನ್ನು ತ್ಯಜಿಸಿ ನನ್ನದೆ ವೇಗೋತ್ಕರ್ಷವೊಂದನ್ನು ರೂಪಿಸಿಕೊಳ್ಳಬಹುದೆ? ಅಭಿಪ್ರಾಯ ಭೇದವಿಲ್ಲದೆ ಹಾಗೂ ಲೋಕದೃಷ್ಟಿಗಳ ವ್ಯತ್ಯಾಸವಿಲ್ಲದೆ ಒಂದು ಪೂರ್ಣನೋಟವನ್ನು ಕೊಡಲು ಸಾಧ್ಯವಾಗುವುದಿಲ್ಲ. ಈಗ ನೇರ ವಿಷಯಕ್ಕೆ ಬರುತ್ತಿದ್ದೇನೆ. ವಕ್ರವಾಗಿ ಬರುವವರೂ ಇದ್ದಾರೆಂದು ನೀನು ನಗೆಯರಳಿಸುತ್ತೀ, ಅಲ್ಲ?

ಮೊನ್ನೆ ನೀನು ಹೇಳದೆ ಕೇಳದೆ ನಮ್ಮೂರಿಗೆ ಬಂದಿದ್ದೆಯಂತಲ್ಲ! ಅದೂ ನಾನಿಲ್ಲದಾಗ! ನಾನು ಎಷ್ಟೋ ದಿನದ ಮೇಲೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಹೊಸ ಕಥೆಗೆ ಪುರಸ್ಕಾರ ಪ್ರದಾನವಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿದ ಹಾಗೂ ಆಯಿತು, ಮುಂದಿನ ಕಥೆಗಳಿಗೆ ಹೊಸ ಪ್ರತಿಮೆ, ಸಂಕೆತಗಳನ್ನು ಹುಡುಕಿಕೊಂಡಂತೆಯೂ ಆಯಿತೆಂಬುದು ನನ್ನ ಲೆಕ್ಕಾಚಾರವಾಗಿತ್ತು. ಬದಲಾದ ಬಾಳ್ವೆಯನ್ನು ಕಲೆಯಾಗಿಸಲು ಬದಲಾದ ಭಾಷೆಯ ಬೇಕು ಎಂದು ಮಂದಿ ಅಲ್ಲಿ ಮುಗಿಬಿದ್ದಿದ್ದರು. ನಿನಗೆ ಅಂತಹ ಕಥೆ ಬೇಕು ಎಂದು ನಾನು ಅಲ್ಲಿ ಹೋದರೆ ನೀನು ಈ ಕೊಂಪೆಗೆ ಬಂದು ಕೂತಿದ್ದಿ. ಹಳೆಯ ಗಾಯವನ್ನು ಹಡ್ಡಿದ್ದಿ. ನಿನ್ನ ಭೆಟ್ಟಿಯನ್ನು ಗುಪ್ತವಾಗಿಟ್ಟದ್ದು ಯಾಕೆಂದು ತಿಳಿಯುತ್ತಿಲ್ಲ. ನೀವು ಮಾತ್ರ ನಿಮ್ಮ ಕಥೆಗಳಲ್ಲಿ ದುರ್ಭೇದ್ಯ ರಹಸ್ಯವನ್ನಿಡಬಹುದು. ನಾವು ಎಲ್ಲವನ್ನೂ ಬಹಿರಂಗಗೊಳಿಸಬೇಕೇನು? ಎಂದು ಕೇಳಿ ನನ್ನ ಬಾಯಿ ಮುಚ್ಚಿಸುತ್ತೀಯೆಂದು ಗೊತ್ತು. ಪಾಡು ಹಾಡುಗಳ ನಡುವೆ ಎಷ್ಟೊಂದು ಅಂತರವಿರುತ್ತದೆಯೆಂಬುದು ನನಗೂ ಗೊತ್ತು. ನಿನಗೂ ಗೊತ್ತು. ಆದರೂ ಕಥೆ ಮತ್ತು ಬದುಕಿನ ದೂರವನ್ನು ಕಡಿಮೆ ಮಾಡಬೇಕೆಂದು ಎಷ್ಟೊಂದು ಕಥೆಗಾರರು, ಎಷ್ಟೊಂದು ಕಲೆಗಾರರು ಶ್ರಮಪಟ್ಟಿಲ್ಲ, ಹೇಳು? ನಾನೂ ನಮ್ಮೂರಿನ ಒಂದು ಘಟನೆಯನ್ನು ಕಥೆಯಾಗಿಸಿದ್ದು ನೀನೂ ಸೇರಿದಂತೆ ಅನೇಕರು ಓದಿ ಸುದ್ದಿಯಾಗಿದ್ದು ನಿನಗೆ ನೆನಪಿರಬಹುದು. ಎಷ್ಟೋ ವರ್ಷಗಳಿಂದ ಈ ಊರ ತಲೆಯ ಮೇಲಿನ ಗೋಮಾಳವೊಂದರಲ್ಲಿ ಗುಡಿಸಲು ಹಾಕಿಕೊಂಡು ಕೂಲಿ-ಕೊಂಡ ಮಾಡುವ ದನಗಾಹಿಗರನ್ನು ಅದರ ಪಕ್ಕಕ್ಕೆ ಜಮೀನು ಹೊಂದಿದ ಅವರದೆ ಜಾತಿಯ ಸತ್ಯಪ್ಪನೆಂಬ ರೆವಿನ್ಯೂ ಕಾರಕೂನನೊಬ್ಬ ಒಕ್ಕಲೆಬ್ಬಿಸಿದ ಪ್ರಸಂಗ ಅದು. ಇದೊಂದು ಸತ್ಯಕಥೆಯೆಂದು ಎಲ್ಲರೂ ಹೇಳಿದ ಮೇಲೆ, ತಹಶೀಲದಾರರು ಆ ನೌಕರನಿಂದ ವಿವರಣೆ ಕೇಳಿದ ಮೇಲೆ ನಾವೆಲ್ಲ ಅದೆಷ್ಟು ಸಂತೋಷಪಟ್ಟಿದ್ದೆವು. ನೀನೂ ನಿನ್ನ ಗೆಳೆಯರೂ ಆ ಕಥೆಯನ್ನೂ ಅದರ ಫಲಶೃತಿಯನ್ನೂ ಮೆಚ್ಚಿಕೊಂಡು ವಾಚಕರ ವಾಣಿಗೆ ಎಷ್ಟೊಂದು ಪತ್ರಗಳನ್ನು ಬರೆದಿದ್ದೀರಿ. ಅದೊಂದು ಆಂದೋಲನವೇ ಆಗಿತ್ತು. ದೀಪದ ಕುಡಿ ಇಷ್ಟು ಪ್ರಜ್ವಲವಾಗುವುದೆಂದು ಯಾರು ತಿಳಿದಿದ್ದರು? ಕೂಲಿಕಾರರಿಗೆ ಅಲ್ಲೆ ಇರಲು ಅವಕಾಶ ಮಾಡಿಕೊಡಲಾಯಿತು.

ಒಂದೆರಡು ವರ್ಷಗಳಲ್ಲಿಯೆ ಆ ಕಾರಕೂನನು ನಿವೃತ್ತನಾಗುವವನಿದ್ದ. ತಾನು ಈಗಲೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆಂದು ಹೇಳಿದಾಗ ತಹಶೀಲದಾರರು ದೊಡ್ಡ ಮನಸ್ಸು ಮಾಡಿ ಅವನ ಮೇಲೆ ಯಾವುದೆ ಕ್ರಮ ಕೈಗೊಳ್ಳಲಿಲ್ಲ. ಹೇಗೂ ಮನೆಗೆ ಹೋಗುತ್ತಾನೆ ಪಾಪ! ಎಂದು ನನ್ನ ಕಥೆಯನ್ನು ಅವರ ಕಡತಗಳಿಂದ ಹರಿದು ಹಾಕಿದರು. ಆ ಕೂಲಿಕಾರರ ಗೆಲುವಿನ ಮುಂದೆ ಅವನು ಹೊಳಪು ಕಳೆದುಕೊಂಡಂತೆ ಕಂಡ.

ಸೇವೆಯಿಂದ ನಿವೃತ್ತಿಯಾದ ದಿನ ಮಾತ್ರ ಅವನ ಮುಖದಲ್ಲಿ ಜಯದ ಹೂವು ಅರಳಿತು. ಹಿಂದೆ ನೌಕರಿಯಲ್ಲಿದ್ದಾಗ ಅವನು ತುಸು ಬೆಚ್ಚುತ್ತಿದ್ದ, ಬೆದರುತ್ತಿದ್ದ. ಈಗವನ ಮುಖದಲ್ಲಿ ಅಳುಕಿನ ಯಾವ ಸೆಳಕೂ ಕಾಣಲಿಲ್ಲ. ಇಡೀ ಹಳ್ಳಿಗೆ ನೆರಳಾಗುವಂತೆ ಚಪ್ಪರ ಹಾಕಿಸಿ ಒಂದು ಔತಣಕೂಟ ಏರ್ಪಡಿಸಿದ. ಅವನನ್ನು ಕ್ಷಮಿಸಿದ್ದ ತಹಶೀಲದಾರರು ಮುಖ್ಯ ಅತಿಥಿಯಾಗಿ ಬಂದಿದ್ದರು. ಸ್ವತಃ ಮಾಮಲೇದಾರರು ಬಂದಿದ್ದಾರೆಂದ ಮೇಲೆ ಊರವರು ಬಾರದಿರುತ್ತಾರೆಯೆ? ಊರ ನಡುವೆ ವಾಸಿಸುತ್ತಿದ್ದವರು ಬಂದಮೇಲೆ ಅಂಚಿನಲ್ಲಿ ಬದುಕುತ್ತಿದ್ದವರು ಬಾರದಿರುತ್ತಾರೆಯೆ? ಹಿಂದೆ ಇವನ ವಿರುದ್ಧವಾಗಿದ್ದ ಕೂಲಿನಾಲಿಯವರು ಈಗ ನಗುನಗುತ್ತ ಪಾಲ್ಗೊಂಡರು. ತಮ್ಮ ಹಿಂದಿನ ಹಗೆಯ ಕೈಕುಲುಕಿದರು. ತಮ್ಮದೆ ಕುಲದವನು ಇಷ್ಟೆಲ್ಲ ಬೆಳೆದಿರುವಾಗ ತಾವು ವಿನಾಕಾರಣ ಅವನ ವಿನಾಶಕ್ಕೆ ಕಾರಣರಾಗಬಹುದೆ? ಶತ್ರುವಿದ್ದವನು ಏಕಾಏಕಿ ಮಿತ್ರನಾದ.

ಸಮೀಕರಣದ ಸೂತ್ರಗಳು ಒಂದೇ ತೆರನಾಗಿರುವುದಿಲ್ಲ ಎನ್ನುವುದಕ್ಕೆ ನಮ್ಮ ಊರು ಒಂದು ಉದಾಹರಣೆಯಾಗಿರಬೇಕು. ಇಲ್ಲದಿದ್ದರೆ ಈಗಿನ ತಹಶೀಲದಾರರು ವರ್ಗವಾಗಿ ಮತ್ತೊಬ್ಬ ತಹಶೀಲದಾರರು ಬರುತ್ತಿರಲಿಲ್ಲ. ಬಂದರೂ ಹಳೆಯ ನೌಕರನನ್ನು ಮತ್ತೆ ಕಾಂಟ್ರಾಕ್ಟ್ ಪದ್ಧತಿಯಿಂದ ನೌಕರಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಹೊಸಬರನ್ನು ತೆಗೆದುಕೊಳ್ಳಲಾಗದು. ಅವರಿಗೆ ಕಾಯ್ದೆ-ಕಾನೂನುಗಳು ಅಷ್ಟು ಗೊತ್ತಿರುವುದಿಲ್ಲ ಎನ್ನುವ ಅವರ ಮಾತು ನಿಜವಿರಬೇಕು. ಯಾಕೆಂದರೆ ಹೊಸ ಹುಡುಗರು ಸತ್ಯಪ್ಪ ಹೇಳಿದ್ದನ್ನೆ ಕೇಳುತ್ತಿದ್ದರು. ಅವನ ಹಾಗೆ ಇರಲು ಪ್ರಯತ್ನಿಸುತ್ತಿದ್ದರು. ಮೇಲಾಗಿ ಸ್ವಲ್ಪ ದಿನಗಳ ಹಿಂದೆ ಸತ್ಯಪ್ಪ ಗ್ರಾಮಪಂಚಾಯತಿ ಇಲೆಕ್ಸನ್‌ನಲ್ಲಿ ಆರಿಸಿ ಬಂದು ಸದಸ್ಯನಾಗಿದ್ದ. ದಿಕ್ಕಿಲ್ಲದವರಿಗೆ ಸೂರು ಒದಗಿಸುವ ಸ್ಥಾಯಿ ಸಮಿತಿಗೆ ಅವನೆ ಅಧ್ಯಕ್ಷನಾಗಿದ್ದ. ರೆವಿನ್ಯೂ ಇಲಾಖೆಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ಒತ್ತಾಯ ಮಾಡಿ ಅವನಿಗೆ ಆ ಕಾರ್ಯ ಒಪ್ಪಿಸಿದ್ದರು. ಫಲಾನುಭವಿಗಳನ್ನು ಗುರುತಿಸುವ, ಆಶ್ರಯ ಮನೆಗಳನ್ನು ಹಂಚುವ ಈ ಜವಾಬ್ದಾರಿಯನ್ನು ಅವನು ಎಷ್ಟು ಚೆನ್ನಾಗಿ ಮಾಡಿದನೆಂದರೆ ಇಡೀ ತಾಲೂಕಿನಲ್ಲಿ ತಂಟೆ-ತಕರಾರುಗಳಿಲ್ಲದೆ ಹಂಚಿಕೆಯಾದ ಪಂಚಾಯತಿಯೆಂದರೆ ಇದೇ ಎಂದಾಯಿತು. ಸೋಜಿಗದ ಸಂಗತಿಯೆಂದರೆ ಗೋಮಾಳದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಆ ಕೂಲಿ ನಾಲಿ ಮಂದಿಗೂ ದೂರದ ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಗಾಂಧಿನಗರದಲ್ಲಿ ಮನೆ ಕೊಡಲಾಗಿತ್ತು.

ಅವರ ಮುಖಂಡ ಯಮುನಪ್ಪ ತಮ್ಮ ಸಮಾಜದ ವತಿಯಿಂದ ಸತ್ಯಪ್ಪನಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ. ಹೊಸ ತಹಶೀಲದಾರರು ಅತಿಥಿಯಾಗಿ ಪಾಲ್ಗೊಂಡು ಸತ್ಯಪ್ಪನ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಗೋಮಾಳದಲ್ಲಿ ಒಂದು ಸಮುದಾಯ ಭವನ ನಿರ್ಮಿಸುವ ಕರಾರಿನ ಮೇರೆಗೆ ಆ ಜಾಗವನ್ನು ಖಾಸಗಿ ಸಹಭಾಗಿತ್ವದ ಯೋಜನೆಯಡಿಯಲ್ಲಿ ಸತ್ಯಪ್ಪನಿಗೆ ತೊಂಭತ್ತರೊಂಭತ್ತು ವರ್ಷಗಳ ಲೀಜ್ ಮೇಲೆ ಸರಕಾರದಿಂದ ವಹಿಸಿ ಕೊಡಲಾಯಿತು. ಅವನ ಕೆಲಸ ಸರಿಯಿಲ್ಲವೆಂದು ಕಂಡುಬಂದರೆ ಅಷ್ಟು ವರ್ಷಗಳ ನಂತರ ಆ ಕರಾರನ್ನು ರದ್ದುಗೊಳಿಸಬಹುದು! ಸರಕಾರ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿದಿರಲಿಲ್ಲ. ಖಾಸಗಿ ಸಂಸ್ಥೆಗಳೂ ಉತ್ತರವಾದಿತ್ವನ್ನು ಪರಿಪಾಲಿಸಬೆಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿತ್ತು.

ಸತ್ಯಪ್ಪ ಚೆನ್ನಾಗಿ ಕೆಲಸ ಮಾಡುತ್ತಿರುವಾಗ ಮಾಡುತ್ತಿಲ್ಲವೆಂದು ಯಾರೇ ಆದರೂ ಸುಳ್ಳು ಬರೆಯಲು ಆಗುತ್ತದೆಯೆ? ಹಾಗಾಗಿ ನವೀನ ನುಡಿಗಟ್ಟು, ಖಾಸಗಿ ಭಾಷೆ ಪ್ರತಿಮೆಗಳನ್ನು ಉಪಯೋಗಿಸಿ ಹಳ್ಳಿಯ ಅಭಿವೃದ್ಧಿ ಕುರಿತ ಕಥೆಯೊಂದನ್ನು ನಾನು ಬರೆದೆ. ಪ್ರಮುಖ ಪತ್ರಿಕೆಯೊಂದರಲ್ಲಿ ಅದು ಪ್ರಕಟಗೊಂಡು, ಮುಂದೆ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿತು. ಅಕ್ಕಪಕ್ಕದ ಹಳ್ಳಿಗಳ ನಿರ್ಗತಿಕ ಮಂದಿಗೂ ಇದೇ ಹಾಳುಬಿದ್ದ ಗುಡ್ಡವನ್ನು ತೋರಿಸಲಾಯಿತು. ಭೂಮಿ ಕಳೆದುಕೊಂಡವರು, ಡ್ಯಾಮಿನ ಕಾಲುವೆ ಕೆಲಸಕ್ಕೆ ಹೋಗುವವರು, ಫ್ಯಾಕ್ಟರಿ ನಿಂತುಹೋದುದಕ್ಕೆ ಉದ್ಯೋಗ ಕಳೆದುಕೊಂಡವರು ಮತ್ತು ಬೆಳಗಾವಿಯ ವಿಮಾನ ನಿಲ್ದಾಣದ ಸಲುವಾಗಿ ಹೊಲ ಕಳೆದುಕೊಂಡವರು ಬದುಕು ಹುಡುಕಿಕೊಂಡು ಗಾಂಧಿನಗರವನ್ನು ಸೇರಿದರು. ಎಲ್ಲಿಂದಲೊ ಬಂದವರು ಹೊಸ ಗುರುತು, ಪರಿಚಯಗಳನ್ನು ಹೇಳಿಕೊಂಡು ದುಡಿಯಲು ಕೆಲಸ ಸಿಗುತ್ತದೆಯೆ, ಕಡಿಮೆ ದುಡ್ಡಿನ ದವಾಖಾನೆಯಿದೆಯೆ, ಪಡಿತರ ಚೀಟಿ ಮಾಡುವ ಕಂಪ್ಯೂಟರ್ ಅಂಗಡಿಯ ಬಾಗಿಲು ತೆರೆದಿರುತ್ತದೆಯೆ ಎಂದೆಲ್ಲ ಬೆಳಗಾದರೆ ಕೇಳುತ್ತಿದ್ದರು.

ಈ ಕಾಲನಿಯವರೆಂದರೆ ಈಗ ಬರೀ ದುಡಿಯುವವರಾಗಿದ್ದಾರೆ. ಮುಂಜಾನೆ ಎದ್ದ ಕೂಡಲೇ ಮ್ಯಾಸಿ ಫರ್ಗ್ಯೂಸನ್ ಟ್ರ್ಯಾಕ್ಟರಗಳೋ, ಫೋರ್ನಾಟ್ ಸೆವೆನ್ ಗಾಡಿಗಳೋ, ನಜ್ಜುಗುಜ್ಜಾದ ಬಸ್ಸುಗಳೋ ಗಾಂಧೀನಗರಕ್ಕೆ ಬರುತ್ತವೆ. ಎಕರೆಗಟ್ಟಲೆ ಕಬ್ಬು ಕಡಿಯಬೇಕಿದ್ದರೆ, ನೂರಾರು ಸಕ್ಕರೆ ಚೀಲಗಳನ್ನು ಲೋಡ್ ಮಾಡಬೇಕಿದ್ದರೆ, ಹತ್ತಾರು ಹೆಕ್ಟೇರ್ ಭೂಮಿಗೆ ನೇಗಿಲು ಹೂಡಬೇಕಿದ್ದರೆ, ಹೊರೆಗಟ್ಟಲೆ ಹೊಟ್ಟು ತೂರಬೇಕಿದ್ದರೆ, ಮನೆ ಕಟ್ಟಬೇಕಿದ್ದರೆ, ಹಳೆಯ ಕಟ್ಟಡಗಳನ್ನು ಕೆಡವಬೇಕಿದ್ದರೆ ಅವುಗಳಲ್ಲಿ ಇಲ್ಲಿಯ ಜನರು ಬುದುಬುದುನೆ ಹತ್ತುತ್ತಾರೆ. ಚುಮುಚುಮು ನಸುಕಿನಲ್ಲಿ ಗಾಂಧಿ ಸರ್ಕಲ್ಲಿನ ಸಿಂಗಲ್ ಚಹಾ, ಹೊಂಗಲ್ ಕರ್ವಿಂಗಿಗೆ ಉಪ್ಪಿಟ್ಟು, ಮಧ್ಯಾಹ್ನಕ್ಕೆ ಖಡಕ್ ರೊಟ್ಟಿ, ಅನ್ನಸಾರು, ಸಂಜೆ ಕೆಲಸ ಮುಗಿದ ಮೇಲೆ ಮತ್ತೊಮ್ಮೆ ಬಿಸಿಬಿಸಿ ಚಹಾ. ಯಾರಿಗುಂಟು, ಯಾರಿಗಿಲ್ಲ ಈ ಭಾಗ್ಯ? ಸತ್ಯಪ್ಪನಿಗೆ ಗೋಮಾಳ ಜಾಗ ಬಿಟ್ಟು ಬಂದಿದ್ದ ಯಮುನಪ್ಪನನ್ನು ನಾನು ಮೊನ್ನೆ ಹುಡುಕಿಕೊಂಡು ಹೋಗಿದ್ದೆ. ಅವನು ಹಳೇ ಓಣಿಯಲ್ಲಿ ಇದ್ದಾನೆ ಎಂದು ಗಾಂಧಿನಗರದ ಅಂಚಿಗೆ ಇದ್ದ ಹಾಳುಮನೆಯೊಂದನ್ನು ತೋರಿಸಿದರು. ಅವನು ತುಂಬ ಸೊರಗಿದ್ದಂತೆ ಕಂಡ. ಆತನ ಮಾತು ದುರ್ಬಲವಾಗಿದ್ದವು. ನಿಶ್ಯಕ್ತಿಯಿಂದ ಸೊರಗಿದ್ದ ಅವನ ಶಬ್ಧಗಳಲ್ಲಿ ಆತ ಅನುಭವಿಸಿದ ಆಘಾತವನ್ನು ಸಂವೇದನಾಶೀಲರು ಗುರುತಿಸಬಹುದಾಗಿದ್ದರು. ಸೊರಗಿದ್ದ ಸ್ವರದಲ್ಲಿ ಆತ ಹೇಳಿದ: ನಾವು ಇಲ್ಲಿಗೆ ಬಂದು ಹೊರಗಣ ವ್ಯಕ್ತಿಗಳಾದೆವು. ಇದ್ದರೂ ಬೆಲೆಯಿಲ್ಲ. ಸತ್ತರೂ ಬೆಲೆಯಿಲ್ಲ. ಅಜ್ಞಾತರು ನಾವು. ನಿಮ್ಮ ಕತೆಗಳಲ್ಲಿ ಮಾತ್ರ ಬದುಕಿದ್ದೇವೆ. ಅವನು ಗಳಗಳನೆ ಅಳತೊಡಗಿದ. ಸ್ವಲ್ಪ ಹೊತ್ತಿನ ನಂತರ ನಿಮ್ಮ ಕತೆಗೆ ಬಹುಮಾನ ಬಂದಿತ್ತು. ಅದನ್ನು ನಿಮ್ಮ ಗೆಳೆಯರು ಹೇಳಿದರು ಎಂದು ಅವನು ನನ್ನ ಹೊಸ ಕತೆಗೆ ಪ್ರಶಸ್ತಿ ಬಂದಿದ್ದನ್ನು ಹೇಳಿದಾಗ ನನ್ನ ಎದೆಗೆ ಚಾಕುವಿನಿಂದ ಚುಚ್ಚಿದಂತಾಯಿತು.

ನಾನು ಆ ಬಹುಮಾನ ತೆಗೆದುಕೊಳ್ಳಲು ಬೆಂಗಳೂರಿಗೆ ಹೋದಾಗ ನೀನು ಈ ಹಳ್ಳಿಗೆ ಭೆಟ್ಟಿ ಕೊಟ್ಟಿದ್ದು ತಿಳಿಯಿತು. ನೀನು ಹೊಸ ಕಥೆಯ ಬಗ್ಗೆ ಹೇಳಿದಾಗ ಯಮುನಪ್ಪನಿಗೆ ನಾನು ಬಹು ಹಿಂದೆ ಅವನ ಬಗ್ಗೆ ಬರೆದಿದ್ದ ಹಳೆಕಥೆ ನೆನಪಾಯಿತಂತೆ. ಅದರ ಪ್ರತಿ ನನ್ನ ಕಡೆ ಇಲ್ಲ ಎಂದೆ. ಎಷ್ಟೋ ದಿನ ಹಿಂದಿನದೆಲ್ಲ ನೆನೆಸಿ ಅಜ್ಜ ಅತ್ತ. ಓದಲಾರದ ತನ್ನ ಮಕ್ಕಳ ಮುಂದೆ ಅದನ್ನು ಹಿಡಿದ. ಹಿಂದಿನದು ನೆನೆದು ಹಿತ್ತಲದಲ್ಲಿ ಅತ್ತರು ಎಂದು ಈ ಮುದುಕನನ್ನು ಬೈಯ್ದು ಕಟ್ಟು ಹಾಕಿಸಿ ಇಟ್ಟಿದ್ದ ಈ ಕಥೆಯನ್ನು ಒಗೆದರಂತೆ. ಕನ್ನಡಿ ಚೂರುಚೂರಾಯಿತು. ಮುದುಕ ಹಳೆಯ ಪೇಪರನ್ನು ಕಣ್ಣಿಗೆ ಹಿಡಿದು ಅತ್ತ. ರಾತ್ರಿ ತಲೆದಿಂಬಿಗೆ ಇಟ್ಟುಕೊಂಡು ನಿದ್ರಿಸಿದ.

ಹೀಗೆ ಆಯಿತೆಂದು ಸೋತ ದನಿಯಲ್ಲಿ ಆತ ಹೇಳುವಾಗ ಏನು ಹೇಳಬೇಕೆಂದು ತಿಳಿಯದೆ ನಾನು ಸತ್ಯಪ್ಪನ ಲೀಜ್ ತೊಂಭತ್ತೊಂಭತ್ತು ವರ್ಷಕ್ಕೆ ಮುಗೀಯುತ್ತದಲ್ಲ, ಅಲ್ಲಿಯತನಕ ಕಾಯಬಹುದಲ್ಲ? ಅಜ್ಜ ನಕ್ಕು ಹೇಳಿದ: ಈ ಕಥೆ ಅಲ್ಲೀತನಕ ನಿಮ್ಮಲ್ಲಿರಲಿ. ಹೇಗೂ ನಿಮ್ಮಲ್ಲಿ ಅದರ ಪ್ರತಿಯಿಲ್ಲ ಎಂದಿದ್ದೀರಿ. ಆ ಕ್ಷಣವೆ ನನ್ನಲ್ಲಿಯ ಕಥೆಗಳು ಸುಟ್ಟುಹೋದವು. ಸೀದಾ ಮನೆಗೆ ಬಂದೆ. ಕ್ಷಮಿಸು ಅಜ್ಜಾ ಎಂದು ನನ್ನ ಹೊಸ ಕಥೆಯನ್ನು ಬೆಂಕಿಗೆ ಹಿಡಿದು ಆ ಬೂದಿಯನ್ನು ಕರಿಚಹಾದಲ್ಲಿ ಹಾಕಿಕೊಂಡು ಕುಡಿದೆ.

-ಡಾ. ಬಸು ಬೇವಿನಗಿಡದ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss