ರಾಮನಗರ: ಕನಕಪುರ ನಗರಸಭೆಯ ನೂತನ ಅಧ್ಯಕ್ಷರಾಗಿ ಮಹಮ್ಮದ್ ಮಕ್ಬುಲ್ ಪಾಷಾ ಹಾಗೂ ಉಪಾಧ್ಯಕ್ಷರಾಗಿ ಗುಂಡಣ್ಣ ಆಯ್ಕೆಯಾದರು. ಕಳೆದ ಎರಡು ವರ್ಷಗಳಿಂದ ಖಾಲಿ ಇದ್ದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಇಂದು ಚುನಾವಣೆ ನಡೆದ ಹಿನ್ನೆಲೆಯಲ್ಲಿ ನಗರಸಭೆಯ ೧೯ನೇ ವಾರ್ಡಿನ ಸದಸ್ಯ ಮಹಮ್ಮದ್ ಮಕ್ಬುಲ್ ಪಾಷಾ ಹಾಗೂ ೯ನೇ ವಾರ್ಡಿನ ಗುಂಡಣ್ಣ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾದ ರಾಮನಗರ ಉಪವಿಭಾಗಾಧಿಕಾರಿ ಡಾ ದಾಕ್ಷಾಯಿಣಿ ಇವರಿಬ್ಬರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು, ಮಾಜಿ ನಗರಸಭಾ ಅಧ್ಯಕ್ಷ ಕೆ. ಎನ್ ದಿಲೀಪ್, ಮಲ್ಲೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ, ಕಾರ್ಯಕರ್ತರು ಹಾಗೂ ನಗರಸಭಾ ಸದಸ್ಯರುಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು,