Monday, August 15, 2022

Latest Posts

ಕನಸು ಕೈ ಜಾರಿದೆ… ಗೆಳೆಯಾ,,, ಅಪನಂಬಿಕೆ ಗಡಿದಾಟುವ ಮುನ್ನ “ಹೇಳಿ ಹೋಗು ಕಾರಣ”

ಸೂರ್ಯನ ಸಮಕ್ಷಮದಲ್ಲಿ ಸಾಗರದಾಚೆ ನಿಂತು ಕಡಲಿಗೆ ಮುತ್ತಿಕ್ಕುತ್ತಿರುವ ಅಲೆಗಳನ್ನು ಹಾಗೇ ನೋಡುತ್ತಲಿದ್ದೆ. ಅದೇಕೊ ಗಂಟಲುಬ್ಬಿ ಬಂದಿತು. ಹೃದಯ ಭಾರವಾಯಿತು. ಕಣ್ಣಂಚು ತೇವವಾಯಿತು. ಎಲ್ಲಿ ಹೋದರು ಬಿಡದ ನೆನೆಪುಗಳೊಂದಿಗೆ ಆಯತಪ್ಪಿ ಮರಳುದಿಂಬದ ಮೇಲೆ ಕುಸಿದು ಬಿಟ್ಟೆ. ಅವನ ನೆನಪುಗಳ ಸಂತೆಯಿಂದ ಹೇಗೆ ಆಚೆ ಬರಲಿ ನಾನು? ಎಲ್ಲೆಲ್ಲೂ ಅವನೇ….. ಅವನ ನೆನಪುಗಳೇ ಎಲ್ಲ….

ಇಲ್ಲಿ ನಾನು ಗೀಚುತ್ತಿರುವುದು ಬರೀ ಶಬ್ದಗಳನ್ನಲ್ಲ. ನನ್ನ ಕಣ್ಣೀರ ಸಾಲುಗಳನ್ನ, ಇಲ್ಲಿರುವುದು ಬರೀ ಅಕ್ಷರಗಳಲ್ಲ ನನ್ನ ಹೃದಯದ ಮಿಡಿತಗಳು. ಇಲ್ಲಿ ವಾಕ್ಯ ಪೂರ್ತಿಯಾಗುತ್ತಿರುವುದು ಪೂರ್ಣವಿರಾಮದಿಂದಲ್ಲ ನನ್ನ ನಿಟ್ಟುಸಿರಿನಿಂದ.

ಗೆಳೆಯಾ ಮೊದಲೆಲ್ಲಾ ನಿನ್ನ ನೆನಪಿಸಿಕೊಂಡರೆ ಸಾಕಿತ್ತು ಮನೆ ತುಂಬ ಪ್ರೇಮನಾದವೇ ಕೇಳಿಸುತ್ತಿತ್ತು. ಮನಸ್ಸು ತುಂಬಿ ಬರುತ್ತಿತ್ತು. ಆದರೆ ಈಗ ಎಲ್ಲೆಲ್ಲೂ ಮರಣ ಮೃದಂಗದ ಸದ್ದು ಕೇಳಿಸುತ್ತಿದೆ. ಹೃದಯಕ್ಕೆ ಬೆಂಕಿ ಬಿದ್ದಂತಾಗುತ್ತದೆ. ನಿನ್ನ ಮಾತೆಂಬ ಅಮೃತ ಸಿಂಚನ ಮಾತ್ರ ಇದನ್ನ ಆಲಿಸಬಲ್ಲದು.

ಈ ಮೂರು ವರ್ಷಗಳ ಏಕಾಂಗಿತನ, ಅಸಹನೆಗಳನ್ನೆಲ್ಲಾ ಶಬ್ದ ಶಬ್ದಗಳಲ್ಲಿ ತುಂಬಿಸಿ ಸಾವಿರಾರು ಪತ್ರಗಳೊಂದಿಗೆ ನಿನಗಾಗಿ ಕಾದಿರುವೆ. ಓದುವ ತಾಳ್ಮೆ ಇಲ್ಲದಿದ್ದರೂ ಪರವಾಗಿಲ್ಲ. ಕೊನೆಯ ಪಕ್ಷ ಅವುಗಳನ್ನೆಲ್ಲ ನಿನ್ನ ಕೈಯಿಂದಲಾದರೂ ನೇವರಿಸು. ನೀನು ಸ್ಪರ್ಶಿಸಿದ್ದು ಅಕ್ಷರಗಳನ್ನಲ್ಲ, ಈ ಹಾಳು ಜೀವವನ್ನ ಎಂದುಕೊಂಡು ಹಾಡುತ್ತಿರುವ ಸೃಷ್ಟಿಯೊಂದಿಗೆ ಮತ್ತೆ ಬದುಕುವ ಪ್ರಯತ್ನ ಮಾಡುತ್ತೇನೆ.

ನಿನ್ನ ಹುಚ್ಚಿಯಂತೆ ಹಚ್ಚಿಕೊಳ್ಳುವ ಮೊದಲು ನಾನು ಕೂಡ ಎಲ್ಲರಂತೆಯೇ ಇದ್ದೆ. ಹನಿ ಹನಿ ಮಳೆಗೆ ಮುಖವನ್ನು ಒಡ್ಡಿ ಖುಶಿಪಡುತ್ತಿದ್ದೆ. ಎಲ್ಲರೊಂದಿಗೆ ಬೆರೆಯುತ್ತ, ತಮಾಷೆ ಮಾಡಿ ನಗುತ್ತಿದ್ದೆ. ನನ್ನ ಸಂತೋಷ ಎಂದೂ ಬರಗಾಲವನ್ನೇ ಕಂಡಿರಲಿಲ್ಲ. ಆದರೆ ಈಗ ಮೌನವೇ ನನ್ನ ಭಾಷೆ. ಎಲ್ಲರೂ ನಗುವಾಗ ಒಂಟಿಯಾಗಿ ಅಳುತ್ತೇನೆ. ಎಲ್ಲರೂ ಅಳುವಗ ಹುಚ್ಚಿಯಂತೆ ನಗುತ್ತೇನೆ. ನಾನು ಇದನ್ನೆಲ್ಲ ಯಾರ ಬಳಿಯಲ್ಲಿ ಹೇಳಲಿ? ಹತ್ತಿರವಿರುವ ನೀನೇ ಹೃದಯವನ್ನು ಮುಚ್ಚಿಕೊಂಡಿರುವಾಗ ಯಾರ ಕಿವಿಯಲ್ಲಿ ಹೇಳಿ ಏನು ಪ್ರಯೋಜನ?

ನನ್ನ ಪಾಡಿಗೆ ನಾನಿದ್ದೆ. ಆಗಂತುಕನಾಗಿ ಬಂದು, ಮೌನವೆಂಬ ಭಯದ ಕತ್ತಲೆಯೊಳಗೆ ಬಿದ್ದಿದ್ದ ನನಗೆ ಧೈರ್ಯವೆಂಬ ಬೆಳಕು ಚೆಲ್ಲಿ, ಭಾಷೆಯೆಂಬ ಬಾಗಿಲು ತೆರೆದು, ಬದುಕೆಂಬ ಜಗತ್ತಿಗೆ ನನ್ನ ಕರೆತಂದೆ. ಇಂದು ಮತ್ತೆ ಕತ್ತಲು ಮೈತುಂಬಿಕೊಂಡಿದೆ. ಆದರೆ ಯಾವುದೇ ಭಯವಿಲ್ಲದೇ ಇದಕ್ಕೆಲ್ಲ ಕಾರಣ ನೀನೇ ಎಂದು ರಾಜಾರೋಷವಾಗಿ ಹೇಳುವೆ ನಾನು.

ಇಷ್ಟೆಲ್ಲ ಆದರೂ ನಾನು ನಿನ್ನೊಂದಿಗೆ ಬದುಕುವ ಆಸೆಯಲ್ಲಿದ್ದೇನೆ ಎಂದುಕೊಂಡೆಯಾ ಅವಿವೇಕಿ? ಮನಸು ನೀಡಿದವಳ ಕನಸು ಕೊಂದವನು ನೀನು. ನನ್ನ ಭಾವನೆಯ ಕಣ್ಣೀರನ್ನು ಕಾಲಲ್ಲಿ ಹೊಸುಕಿ ಹಾಕಿದವನು ನೀನು. ಅರ್ಥವಿಲ್ಲದ ನಿನ್ನ ಅನುಮಾನ ನನ್ನ ವ್ಯಕ್ತಿತ್ವವನ್ನೇ ಅನುಮಾನಿಸಿತು. ನನ್ನ ಬದುಕಿಗೊಂದು ಕಪ್ಪು ಚುಕ್ಕಿ ಇಟ್ಟು ಬೆನ್ನು ಹಾಕಿ ಹೊರಟುಹೋದವನು ನೀನು.

ನನ್ನ ನಿಸ್ವಾರ್ಥ ಪ್ರೀತಿಯ ಮೇಲೆ ಆಣೆ ಕಣೋ. ನಿನ್ನ ಅನುಮಾನದಲ್ಲಿ ಸಾಸಿವೆಯಷ್ಟೂ ಸತ್ಯವಿಲ್ಲ. ಸತ್ಯ ಅಸತ್ಯಗಳನ್ನು ತಿಳಿಯದ ಪಾಪಿಗಳ ಎದುರು ಗೋಗರೆದರೆ ಪ್ರಯೋಜನವಿಲ್ಲ. ಆದರೂ ಕೊನೆಯಲ್ಲಿ ಒಂದು ಕೋರಿಕೆ ಇದೆ. ನಿನ್ನ ಅನುಮಾನ ಸುಳ್ಳೆಂದು ನಿನಗೆ ಅರಿವಾದರೆ ಒಮ್ಮೆ ನನ್ನೆದುರು ಕ್ಷಮೆ ಯಾಚಿಸಿಬಿಡು. ಎಲ್ಲವನ್ನು ಮರೆತು ಬಾರದ ಲೋಕಕ್ಕೆ ಹೊರಟು ಹೋಗುವೆ…

  • ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss