ಉಡುಪಿ: ಎರಡುವರೆ ತಿಂಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆಸಿದ ಜಿಲ್ಲಾಧಿಕಾರಿಯವರಿಗೆ, ಮತ್ತೆ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡುವ ಭಾಗ್ಯ ಲಭಿಸಿದೆ.
ಇನ್ನು ಮೂರು ದಿನಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ ಇರುವುದರಿಂದ, 2020ನೇ ಸಾಲಿನ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಧ್ವಜಾರೋಹಣ ನಡೆಸಲಿದ್ದಾರೆ. ಉಡುಪಿ ಮತ್ತು ಹಾವೇರಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಹಾವೇರಿ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೂ ಸಚಿವರು ಹಾವೇರಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗಾಗಿ ಕನ್ನಡ ರಾಜ್ಯೋತ್ಸವದ ಉಡುಪಿ ಜಿಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಅದೀಗ ಹುಸಿಯಾಗಿದೆ. ಜಿಲ್ಲಾಧಿಕಾರಿಯವರು ಎರಡನೇ ಬಾರಿ ಧ್ವಜಾರೋಹಣ ಮಾಡುವ ಅವಕಾಶ ಪಡೆದಿದ್ದಾರೆ.