Saturday, August 13, 2022

Latest Posts

ಕಬಿನಿ ಜಲಾಶಯದಿಂದ ನದಿಗೆ ೩೫ ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ : ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಮೈಸೂರು: ಕೇರಳದ ವೈನಾಡು, ಕೊಡಗು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗಿರುವ ಕಾರಣ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.

ಇದರಿಂದಾಗಿ ಕಪಿಲಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕಬಿನಿ ಜಲಾಶಯಕ್ಕೆ ೨೬೦೦೦ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈಗಾಗಲೇ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯದ ನೀರಿನ ಮಟ್ಟ ೨೨೮೪ಅಡಿಯನ್ನು ತಲುಪಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನದಿಗೆ ಒಟ್ಟು ೩೫೦೦೦ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯವು ಒಟ್ಟು ೧೯.೫೨ ಟಿ. ಎಂ. ಸಿ. ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಗರಿಷ್ಠ ನೀರಿನ ಮಟ್ಟ ಮುಟ್ಟಿದೆ.

ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಿ ಇನ್ನೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವ ಸಾಧ್ಯತೆಯಿರುವ ಕಾರಣ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹಾಗೂ ಆಸ್ತಿಪಾಸ್ತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.

ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ:  ಗೇಟ್ ಹಾಕದೆ, ಸೈರನ್ ಮಾಡದೇ ಏಕಾಏಕಿ ನದಿಗೆ ಕಬಿನಿ ಜಲಾಶಯದ ಅಧಿಕಾರಿಗಳ ನಿರ್ಲಕ್ಷ÷್ಯದಿಂದ ನೀರು ಬಿಟ್ಟ ಹಿನ್ನೆಲೆ ಸೇತುವೆ ಮುಳುಗಡೆಯಾಗಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ.

ಶನಿವಾರ ತಡರಾತ್ರಿ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿತು. ಮೊದಲೇ ಜಲಾಶಯ ಭರ್ತಿಯಾಗಿದ್ದ ಕಾರಣ, ಸುರಕ್ಷತೆಯ ದೃಷ್ಠಿಯಿಂದ ಅಧಿಕಾರಿಗಳು ಯಾವುದೇ ಮುನ್ಸೂಚನೆ, ಸೈರನ್ ಕೂಗಿಸದೆ ಕಬಿನಿ ಜಲಾಶಯದಿಂದ ೩೫ ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡತೊಡಗಿದರು. ಇದರ ಅರಿವು ಇಲ್ಲದೆ ಡ್ಯಾಂ ಮುಂಭಾಗದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆ ಮೇಲೆ ಏಕಾಏಕಿ ನೀರು ಹರಿದರಿಂದ ಜನರು ಆತಂಕಗೊoಡರು.

ಆದರೂ ಜೀವ ಭಯದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಜನರು ತೆರಳಿದ್ದಾರೆ. ಅಲ್ಲದೇ ತಕ್ಷಣವೇ ಡ್ಯಾಂನ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ತಕ್ಷಣವೇ ಜಲಾಶಯದಿಂದ ಹೊರಬಿಡುತ್ತಿದ್ದ ನೀರಿನ ಪ್ರಮಾಣ ಕಡಿಮೆ ಮಾಡಿ, ಸೇತುವೆಯ ಮೇಲಿದ್ದ ಜನರು ತಮ್ಮ ಗ್ರಾಮಗಳಿಗೆ ತೆರಳು ಅನುವು ಮಾಡಿಕೊಟ್ಟರು. ಬಳಿಕ ಸೇತುವೆ ಎರಡು ಭಾಗದಲ್ಲಿದ್ದ ಗೇಟ್‌ಗಳನ್ನು ಬಂದ್ ಮಾಡಿ, ಆ ಬಳಿಕ ಎಚ್ಚರಿಕೆಯ ಸೈರನ್ ಮೊಳಗಿಸಿದರು.

ಒಂದು ವೇಳೆ ಗ್ರಾಮಸ್ಥರು ಮಾಹಿತಿ ನೀಡದೆ, ಅಧಿಕಾರಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರೆ, ಸೇತುವೆ ಮೇಲೆ ಸಂಚರಿಸುತ್ತಿದ್ದ ವಾಹನಗಳು, ಜನರು ಕೊಚ್ಚಿ ಹೋಗುವ ಸಾಧ್ಯತೆಗಳಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss