ಬಳ್ಳಾರಿ: ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಿತು. ಕಾಂಗ್ರೆಸ್ ಪಕ್ಷದ ಸೈಯದ್ ಅಮಾನುಲ್ಲಾ ಅಧ್ಯಕ್ಷರಾಗಿ ಹಾಗೂ ಬೋರಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿದರು.
ಕಳೆದ ಅ.20ರಂದು ಅಧ್ಯಕ್ಷ ಹಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಬೆಂಗಳೂರಿನ ಉಚ್ಚ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ನಂತರ ಅ.29ರಂದು ಚುನಾವಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆ, ಆಯ್ಕೆ ಪ್ರಕ್ರೀಯೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೇ ನಾಮಪತ್ರಗಳಹ ಸಲ್ಲಿಕೆಯಾದ ಹಿನ್ನೆಲೆ ಅವಿರೋಧ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಸೈಯದ್ ಅಮಾನುಲ್ಲಾ ಹಾಗೂ ಉಪಾಧ್ಯಕ್ಷರಾಗಿ ಬೋರಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೊಸಪೇಟೆ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಎಚ್.ವಿಶ್ವನಾಥ್ ಅವರು ಘೋಷಿಸಿದರು.
ಕಮಲಾಪುರ ಪಟ್ಟಣ ಪಂಚಾಯಿತಿಯ19 ಸ್ಥಾನಗಳಲ್ಲಿ 14 ಕಾಂಗ್ರೆಸ್ ಹಾಗೂ 5 ಬಿಜೆಪಿ ಸದಸ್ಯರಿದ್ದಾರೆ.