Thursday, March 4, 2021

Latest Posts

ಕರಾವಳಿಯಲ್ಲಿ ಈ ಬಾರಿ ಶೇ. 40 ರಷ್ಟು ಅಡಿಕೆ ಫಸಲು ವರುಣಾರ್ಪಣ!

ದಿಗಂತ ವರದಿ, ಪುತ್ತೂರು:

ಅಕಾಲಿಕ ಮಳೆಯ ಕಾರಣದಿಂದಾಗಿ ಅಡಿಕೆ ತೋಟ ಗಳಲ್ಲಿ ಬಿಳಿ ನಳ್ಳಿ ಉದುರಲು ಆರಂಭವಾಗಿದೆ. ಅರಳಿದ ಹಿಂಗಾರದಲ್ಲಿ ಮಳೆ ನೀರು ನಿಂತ ಪರಿಣಾಮ ಹಿಂಗಾರ ಕೊಳೆತು ಬೀಳುವ ಸಾಧ್ಯತೆ ಇದೆ. ಈಗಾಗಲೇ ಒಂದು ವಾರದಿಂದ ಈ ಅಕಾಲಿಕ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮಂಗಳೂರು ಚಾಲಿ ಅಡಿಕೆ ಫಸಲು ಶೇ.40ರಷ್ಟು ಹಾನಿಯಾಗಬಹುದು ಎಂಬ ಅಭಿಪ್ರಾಯವನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ.

ಹಣ್ಣಡಕೆ ಇನ್ನೂ ಒಣಗಿಲ್ಲ…: ಅಡಿಕೆಯ ಪ್ರಥಮ ಕೊಯ್ಲು ಮುಗಿದು ಒಣಗಲು ಹಾಕಿದ ಅಡಿಕೆಯು ಮಳೆಯಿಂದ ಹಾನಿಗೊಂಡಿದೆ. ಇದರ ಪರಿಣಾಮವಾಗಿ ಈ ಭಾಗದ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಎರಡನೇ ದರ್ಜೆಯ ಅಡಿಕೆಯಾಗಿ ಮಾರಾಟಗೊಳ್ಳುವ ಅಪಾಯ ಕೂಡಾ ಎದುರಾಗಲಿದೆ. ಎರಡನೇ ಕೊಯ್ಲಿನ ಹಣ್ಣಡಕೆ ಇನ್ನೂ ಒಣಗಿಲ್ಲ. ಒಣಗಲು ಹಾಕಿದ ಹಣ್ಣಡಕೆಯ ಮೇಲೆ ಮಳೆ ಸುರಿದರೆ ಅಡಿಕೆ ಗುಣಮಟ್ಟ ಕಳೆದುಕೊಳ್ಳಲು ಕಾರಣವಾಗಲಿದೆ.

ಕಾಳುಮೆಣಸು ಕೃಷಿಯಲ್ಲಿ:
ಈಗ ಕಾಳುಮೆಣಸಿನ ಕಟಾವು ಸಮಯ. ಬಳ್ಳಿಯಲ್ಲಿ ಬಲಿತ ಕಾಳುಮೆಣಸನ್ನು ಕೊಯ್ದು ಒಣಗಿಸುವ ಸಂದರ್ಭ. ಕಾಳು ಮೆಣಸನ್ನು ಬಳ್ಳಿಯಲ್ಲಿಯೇ ಬಿಟ್ಟರೂ ಅಕಾಲಿಕ ಮಳೆಯ ಪರಿಣಾಮದಿಂದಾಗಿ ಬೆಳೆ ಕೊಳೆತು ಹೋಗುವ ಅಪಾಯ ಕೂಡಾ ಇದೆ.
ಇನ್ನು ಅಡಿಕೆ ತೋಟಗಳಲ್ಲಿ ಉಪ ಬೆಳೆಯಾಗಿ ಕಾಳು ಮೆಣಸನ್ನು ಬೆಳೆಸುವುದರಿಂದ ಅಕಾಲಿಕ ಮಳೆಯ ಆರ್ಥಿಕ ಹೊಡೆತ ಅಡಿಕೆಯ ಜೊತೆಗೆ ಅಪಾಯ ಈಗ ಕಾಳು ಮೆಣಸನ್ನೂ ತಟ್ಟಿದೆ.

ಅಕಾಲಿಕ ಮಳೆಯಿಂದ ಮುಂದೆ ಅಪಾಯವಿದೆ…: ಸಹಜವಾಗಿ ಜನವರಿ ತಿಂಗಳು ಮುಂಗಾರುಪೂರ್ವ ಮಳೆ ಸುರಿಯುವ ಸಂದರ್ಭವಲ್ಲ. ಮಾರ್ಚ್ ನಂತರ ಏಪ್ರಿಲ್ ತಿಂಗಳಿನಲ್ಲಿ ಸುರಿಯುವ ಮುಂಗಾರು ಪೂರ್ವ ಮಳೆ ಅಥವಾ ಅಕಾಲಿಕ ಮಳೆ ಅಡಿಕೆ ತೋಟಗಳಿಗೆ ಹೆಚ್ಚಿನ ಸಹಕಾರಿ ಎಂದು ಕೃಷಿಕರು ಅಭಿಪ್ರಾಯ ಪಡುತ್ತಾರೆ. ಇನ್ನೂ 4 ದಿನಗಳ ಕಾಲ ಮಳೆ ಮುಂದುವರಿಯುವ ಅಪಾಯವಿದೆ.

ಮಳೆಯ ಅಬ್ಬರಕ್ಕೆ ರಬ್ಬರ್ ಟ್ಯಾಪಿಂಗ್ ಬಂದ್!: ಅಕಾಲಿಕ ಮಳೆಯ ಕಾರಣದಿಂದಾಗಿ ರಬ್ಬರ್ ತೋಟಗಳಲ್ಲಿ ಟ್ಯಾಪಿಂಗ್ ಕಾರ್ಯ ಕೂಡಾ ಸ್ಥಗಿತವಾಗಿದೆ. ಮಳೆಗಾಲದಲ್ಲಿ ಮಾತ್ರ ರಬ್ಬರ್ ಮರಗಳಿಗೆ ರೈನ್‌ಗಾರ್ಡ್ ಅಳವಡಿಸಲಾಗುತ್ತದೆ. ಮಳೆಗಾಲ ಕಳೆದ ಬಳಿಕ ರೈನ್‌ಗಾರ್ಡ್‌ಗಳನ್ನು ಮರಗಳಿಂದ ತೆರವುಗೊಳಿಸಲಾಗುತ್ತದೆ. ರೈನ್‌ಗಾರ್ಡ್ ಇಲ್ಲದ ಕಾರಣ ರಬ್ಬರ್ ಮರಗಳಿಂದ ಟ್ಯಾಪಿಂಗ್ ನಡೆಸಲು ಕೂಡಾ ಮಳೆ ಅಡ್ಡಿ ಪಡಿಸಿದೆ. ರಬ್ಬರ್ ಬೆಳೆಗಾರರಿಗೆ ಈ ಅಂಶ ಕೂಡಾ ಆರ್ಥಿಕ ನಷ್ಟಕ್ಕೆ ಕಾರಣವಾಗಲಿದೆ.

ಆರ್ಥಿಕತೆಗೆ ಹೊಡೆತ: ಅಕಾಲಿಕ ಮಳೆಯ ಪರಿಣಾಮ ಏಕಬೆಳೆ ಅಥವಾ ಮಿಶ್ರ ಬೆಳೆಗಳಲ್ಲಿ ಬೆಳೆಗಾರರಿಗೆ ಫಸಲು ನಷ್ಟ ಉಂಟಾದ ಪರಿಣಾಮ ಕರಾವಳಿಯ ಕೃಷಿ ಆರ್ಥಿಕತೆಯ ಜೊತೆಗೆ ಒಟ್ಟು ಆರ್ಥಿಕತೆಯ ಮೇಲೆ ಪರಿಣಾಮ ಬೀಳಲಿದೆ.  ಅಡಿಕೆ, ಕಾಳುಮೆಣಸು ಮತ್ತು ರಬ್ಬರ್ ಬೆಳೆಗಳಿಗೆ ಮಳೆ ಹೊಡೆತ ನೀಡಿದೆ. ಕೃಷಿ ಆರ್ಥಿಕತೆಯ ಚೇತರಿಕೆಯ ಕಾಲದಲ್ಲಿಯೇ ಬೆಳೆಗಾರರಿಗೆ ಈ ಸಂಕಷ್ಟ ಎದುರಾಗಿದೆ ಎಂದು ಕೃಷಿ ಮಾರುಕಟ್ಟೆ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅಭಿಪ್ರಾಯಿಸಿದ್ದಾರೆ.

ಅನಿರೀಕ್ಷಿತ ನಷ್ಟ: ಅಕಾಲಿಕ ಮಳೆಯಿಂದಾಗಿ ಅಡಿಕೆ, ಕಾಳುಮೆಣಸು ಮತ್ತು ರಬ್ಬರ್ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಕೃಷಿ ಮಾರುಕಟ್ಟೆ ಚೇತರಿಕೆಯ ಹಂತದಲ್ಲಿ ಇರುವಾಗಲೇ ಬಂದ ಈ ಮಳೆ ಕೃಷಿಕರಿಗೆ ಆರ್ಥಿಕ ನಷ್ಟದ ದಾರಿಗೆ ಕಾರಣವಾಗಿದೆ. ಇನ್ನೂ ಒಂದಷ್ಟು ದಿನ ಇದೇ ರೀತಿ ಮಳೆ ಸುರಿದರೆ ನಷ್ಟದ ಪ್ರಮಾಣ ಹೆಚ್ಚಾಗಲಿದೆ ಎಂದು ಬಿಳಿನೆಲೆಯ ಅಡಿಕೆ ಕೃಷಿಕ ಕೆ.ಎನ್. ಈಶ್ವರ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!