Thursday, August 11, 2022

Latest Posts

ಮಂದಾರ್ತಿ ಮೇಳಗಳ ಚೌಕಿಯಲ್ಲಿ ಕಳೆಗಟ್ಟಿದೆ ಬಣ್ಣಗಾರಿಕೆ, ಮತ್ತೊಮ್ಮೆ ಕೇಳಲಾರಂಭಿಸಿದೆ ಚಂಡೆ, ಮದ್ದಳೆ, ಗೆಜ್ಜೆಯ ಸದ್ದು!

ಉಡುಪಿ: ಆರು ತಿಂಗಳ ನಂತರ ಕರಾವಳಿಯಲ್ಲಿ ಮತ್ತೊಮ್ಮೆ ಚಂಡೆ, ಮದ್ದಳೆ, ಗೆಜ್ಜೆಯ ಸದ್ದು ಕೇಳಲಾರಂಭಿಸಿದೆ. ಕೊನೆಗೂ ಯಕ್ಷಗಾನದ ಚೌಕಿಯಲ್ಲಿ ಬಣ್ಣಗಾರಿಕೆ ಕಳೆಗಟ್ಟಿದೆ. ಉಡುಪಿಯ ಮಂದಾರ್ತಿ ಕ್ಷೇತ್ರದಲ್ಲಿ ಯಕ್ಷಗಾನದ ಹರಕೆ ಅಥವಾ ಬೆಳಕಿನ ಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶ ಸಿಕ್ಕಿದೆ.
ಮಂದಾರ್ತಿಯ ಶ್ರೀದುರ್ಗಾಪರಮೇಶ್ವರಿ ಅಮ್ಮ, ಕಲಾವಿದರ ಕೈ ಹಿಡಿದಿದ್ದಾಳೆ. ಭಕ್ತರಿಂದ ಬೆಳಕಿನ ಸೇವೆಯ ಹರಕೆ ಪಡೆಯುವ ಈ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ಆರಂಭಗೊಂಡಿದೆ. ಕೋವಿಡ್ ಕಂಟಕದಿಂದ ಕಂಗೆಟ್ಟಿದ್ದ ಕಲಾವಿದರು ಸೆ. 25ರಿಂದ ಮತ್ತೆ ಬಣ್ಣ ಹಚ್ಚಿದ್ದಾರೆ.
ಕೋವಿಡ್-19 ವಕ್ಕರಿಸಿದ ನಂತರ ಕಳೆದ ಆರು ತಿಂಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಇದೀಗ ಕೋವಿಡ್ ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಯಕ್ಷಗಾನದ ಹರಕೆ ಸಲ್ಲಿಸಲು ಸರಕಾರ ಅನುವು ಮಾಡಿಕೊಟ್ಟಿದೆ. ಸದ್ಯ ಪ್ರತೀದಿನ ಎರಡು ರಂಗಸ್ಥಳಗಳಲ್ಲಿ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿವೆ. ಈಗಾಗಲೇ ಮಂಗಳವಾರದ ವರೆಗೆ 10 ಮಂದಿ ಸೇವಾರ್ಥಿಗಳಿಂದ ಸೇವೆಯಾಟಗಳು ನಡೆದಿವೆ.
ಪಂಚ ಮೇಳಗಳಲ್ಲಿ 200ಕ್ಕೂ ಮಿಕ್ಕಿ ಕಲಾವಿದರು
ಭಕ್ತರು ತಮ್ಮ ಸಂಕಷ್ಟ ಕಾಲದಲ್ಲಿ ಮಂದಾರ್ತಿ ಅಮ್ಮನಿಗೆ ಬೆಳಕಿನ ಸೇವೆಯ ಹರಕೆ ಹೊರುತ್ತಾರೆ. ಸಂತಾನ ಭಾಗ್ಯ, ಭೂವ್ಯಾಜ್ಯ ಸಹಿತ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ತಾಯಿಗೆ ಹರಕೆ ಹೇಳುವ ಪರಿಪಾಠವಿದೆ. ಭಕ್ತರ ಹರಕೆ ತೀರಿಸಲೆಂದೇ ಮಂದಾರ್ತಿಯಲ್ಲಿ ದಶಾವತಾರದ ಐದು ಯಕ್ಷಗಾನ ಮೇಳಗಳಿವೆ. ಇಲ್ಲಿ 200ಕ್ಕೂ ಅಧಿಕ ಕಲಾವಿದರಿದ್ದಾರೆ. ಪ್ರತೀದಿನ ಈ ಐದು ಮೇಳಗಳು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಿರುಗಾಟ ನಡೆಸಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡಿ ಹರಕೆ ಪೂರೈಸುತ್ತಾರೆ. ಸದ್ಯ ತಿರುಗಾಟದ ಮೇಳಗಳಿಗೆ ವಿರಾಮ ನೀಡಿ, ಕ್ಷೇತ್ರದಲ್ಲಿ ಮಳೆಗಾಲದ ಸೇವೆಯಾಟವನ್ನು ಪ್ರಾರಂಭಿಸಲಾಗಿದೆ.
ಕ್ಷೇತ್ರದಲ್ಲಿ 25 ವರ್ಷಗಳ ಸೇವೆಯಾಟ ಬುಕ್
ಮಂದಾರ್ತಿ ಕ್ಷೇತ್ರದಲ್ಲಿ ಈಗಾಗಲೇ ಬುಕ್ ಆಗಿರುವ ಹರಕೆಯಾಟ ತೀರಿಸಲು ಬರೋಬ್ಬರಿ 25ವರ್ಷ ಬೇಕು. ಪ್ರಸ್ತುತ 2045ರ ವರೆಗೆ ಬೆಳಕಿನ ಸೇವೆ ಬುಕ್ ಆಗಿದೆ. ಭಕ್ತರು ಹೊಸತಾಗಿ ಹರಕೆ ಹೊತ್ತರೆ 2045ರ ನಂತರವಷ್ಟೇ ಯಕ್ಷಗಾನ ಹರಕೆ ಪೂರೈಸಬಹುದು! ಕೊರೋನಾ ಬಂದ ಪರಿಣಾಮ ನಾಲ್ಕೈದು ತಿಂಗಳ ಹರಕೆ ಸೇವೆ ಬಾಕಿಯಾಗಿದೆ. ಅಂದರೆ ಸುಮಾರು 600 ಯಕ್ಷಗಾನ ಪ್ರದರ್ಶನ ರದ್ದಾಗಿದೆ. ಇದರಿಂದ ಮೇಳಗಳಿಗೆ ಇನ್ನಷ್ಟು ಒತ್ತಡ ಜಾಸ್ತಿಯಾಗಲಿದೆ.
ನಾಲ್ಕು ವರ್ಷಗಳ ಹಿಂದೆ ಮಂದಾರ್ತಿ ಕ್ಷೇತ್ರದಲ್ಲಿ ಮಳೆಗಾಲದ ಸೇವೆಯಾಟ ಆರಂಭಿಸಲಾಗಿತ್ತು. ಮೊದಲ ವರ್ಷ ಒಂದು ಮೇಳದಿಂದ ಸೇವೆಯಾಟ ನಡೆದರೆ, ಕಳೆದ ಎರಡು ವರ್ಷಗಳಲ್ಲಿ ಎರಡು ಮೇಳಗಳ ಹರಕೆ ಸೇವೆ ನಡೆಯುತ್ತಿದೆ. ಈ ವರ್ಷವೂ ಎರಡು ಮೇಳಗಳ ಸುಮಾರು 40 ಮಂದಿ ಕಲಾವಿದರು ಕೋವಿಡ್ ನಿಯಮಾವಳಿಯೊಂದಿಗೆ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರದರ್ಶನ ನಡೆಸುತ್ತಿದ್ದಾರೆ. ಇದಕ್ಕೆ ಹಿಂದು ಧಾರ್ಮಿಕ ದತ್ತಿ ಇಲಾಖೆ ಹಾಗೂ ಉಡುಪಿ ಜಿಲ್ಲಾಧಿಕಾರಿ ಅವರಿಂದ ಅನುಮತಿಯನ್ನು ಪಡೆಯಲಾಗಿದೆ. ಕಲಾವಿದರೂ ಸೇರಿದಂತೆ ಕೇವಲ 100 ಮಂದಿಯ ಉಪಸ್ಥಿತಿಯಲ್ಲಿ ಸೀಮಿತ ಅವಧಿಯ ಯಕ್ಷಗಾನ ಪ್ರದರ್ಶನ ನಡೆಸಲು ಸರಕಾರವೂ ಅವಕಾಶ ಕೊಟ್ಟಿದೆ.

ನಿರಂತರ ಕಲಾರಾಧನೆ ಮಾಡುವ ಅವಕಾಶವಾಗಲಿ
ಕೊರೋನಾ ಮಹಾಮಾರಿ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ದಿನೇದಿನೇ ಜಾಸ್ತಿಯಾಗುತ್ತಿದೆ. ಇದೀಗ ಕೋವಿಡ್ ನಿಯಮಾವಳಿಯಂತೆ ಮಂದಾರ್ತಿ ದೇವಿಯ ಸನ್ನಿಧಿಯಲ್ಲಿ ಯಕ್ಷಗಾನ ಕಲಾಸೇವೆ ಮಾಡುತ್ತಿರುವ ನಮಗೆ ಮುಂದಿನ ದಿನಗಳು ಹಾಗೂ ವರ್ಷಗಳಲ್ಲಿ ನಿರಂತರವಾಗಿ ಕಲಾಸೇವೆಯನ್ನು ಮಾಡುವ ಅವಕಾಶವನ್ನು ಕಲ್ಪಿಸಲಿ ಎಂದು ಪ್ರಾರ್ಥಿಸುತ್ತೇವೆ. ಮಳೆಗಾಲದ ಸೇವೆಯಾಟವನ್ನು ಆರಂಭಿಸಿದ್ದೇವೆ. ಶ್ರೀಕ್ಷೇತ್ರ ಮಂದಾರ್ತಿ ಮೇಳವು ಪ್ರಸಿದ್ಧ ಮೇಳ. ಇಲ್ಲಿ ಹರಕೆ ಸೇವೆಯಾಟದ ನೋಂದಣಿಯ 2045ರವರೆಗೆ ಈಗಾಗಲೇ ಬುಕ್ಕಿಂಗ್ ಆಗಿದೆ.
 ನರಾಡಿ ಭೋಜರಾಜ ಶೆಟ್ಟಿ, ಮೇಳದ ಹಿರಿಯ ಕಲಾವಿದರು.

ನಾಲ್ಕು ತಿಂಗಳ ನಂತರ ಮಳೆಗಾಲದ ಸೇವೆಯಾಟ
ಕೊರೋನಾ ಸಂಕಷ್ಟದಿಂದ ಮಾ. 20ರಿಂದ ಬೆಳಕಿನ ಸೇವೆ ಸ್ಥಗಿತಗೊಳಿಸಲಾಗಿತ್ತು. ಆದರೂ ಕಲಾವಿದರಿಗೆ ತೊಂದರೆಯಾಗದಂತೆ ಮೇ 22ರವರೆಗೆ ಎಲ್ಲರಿಗೂ ವೇತನ ನೀಡಲಾಗಿದೆ. ಸಾಮಾನ್ಯವಾಗಿ ಮಳೆಗಾಲದ ಸೇವೆಯಾಟವನ್ನು ಜೂನ್‌ನಿಂದ ಪ್ರಾರಂಭ ಮಾಡುತ್ತಿತ್ತು. ಆದರೆ ಕೊರೋನಾದಿಂದಾಗಿ ಸಾಧ್ಯವಾಗಿರಲಿಲ್ಲ. ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗಸೂಚಿಯ ಪ್ರಕಾರ, ಷರತ್ತುಗಳನ್ನು ಪಾಲಿಸಿಕೊಂಡು ಇಲಾಖೆ ಮತ್ತು ಜಿಲ್ಲಾಧಿಕಾರಿ ಅವರಿಂದ ಆದೇಶವನ್ನು ಪಡೆದುಕೊಂಡು ಯಕ್ಷಗಾನ ಸೇವೆಯನ್ನು ಪ್ರಾರಂಭಿಸಿದ್ದೇವೆ.
ಧನಂಜಯ ಶೆಟ್ಟಿ, ದೇವಳದ ಆಡಳಿತ ಮೊಕ್ತೇಸರರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss