ಹೊಸದಿಗಂತ ವರದಿ, ಮಂಗಳೂರು:
ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಮೀನುಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಸಮಗ್ರ ಕರಾವಳಿ ಮತ್ತು ಮೀನುಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕಿದೆ ಎಂದು ಮಂಗಳೂರು ಮೀನುಗಾರಿಕಾ ಕಾಲೇಜು ಡೀನ್ ಡಾ. ಸೆಂಥಿಲ್ ವೇಲು ಹೇಳಿದರು.
ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಬುಧವಾರ ನಡೆದ ‘ಮೀನುಗಾರಿಕಾ ಮುಖಂಡರ ಜತೆ ಸಂವಾದ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಾವಳಿಯ ಮೀನುಗಾರಿಕಾ ಕ್ಷೇತ್ರ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಮೀನುಗಾರಿಕೆ ಮತ್ತು ಬಂದರು ಸಂಬಂಧಿಸಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎನ್ಎಂಪಿಟಿ ಅಧ್ಯಕ್ಷರು, ರಾಜ್ಯ ಸರಕಾರದ ಪರಿಸರ (ಸಿಆರ್ಜೆಡ್) ಇಲಾಖೆ ಕಾರ್ಯದರ್ಶಿ, ಮಂಗಳೂರು ಮೀನುಗಾರಿಕಾ ಕಾಲೇಜು ಡೀನ್, ಮೀನುಗಾರಿಕಾ ಮತ್ತು ಅರಣ್ಯ ಇಲಾಖೆ ನಿರ್ದೇಶಕರು ಸದಸ್ಯರಾಗಿರುವ ಪ್ರಾಧಿಕಾರ ರಚಿಸುವುದು ಸೂಕ್ತ ಎಂದರು.
ಮೀನುಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಟ್ರಾಲ್ ಬೋಟ್ ಅಸೋಸಿಯೇಶನ್ ಅಧ್ಯಕ್ಷ ನಿತಿನ್ ಕುಮಾರ್, ಪರ್ಸೀನ್ ಬೋಟ್ ಅಸೋಸಿಯೇಶನ್ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ, ಉಪಾಧ್ಯಕ್ಷ ನವೀನ್ ಕುಮಾರ್ ಬೆಂಗ್ರೆ, ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ ವಿವರಿಸಿದರು.
ಅಳಿವೆಬಾಗಿಲಿನಲ್ಲಿ ಬೋಟ್ಗಳ ಚಲನೆಗೆ ಸೂಕ್ತ ದಾರಿ, ಸುಸಜ್ಜಿತ ದಕ್ಕೆ, ಅಳಿವೆಬಾಗಿಲಿನಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಹೂಳೆತ್ತುವಿಕೆ, ಹಳೆ ಬಂದರಿನ ಅಭಿವೃದ್ಧಿ, ಭಾರತಿ ಶಿಪ್ ಯಾರ್ಡ್ನಿಂದ ಆಗುತ್ತಿರುವ ತೊಂದರೆ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿರುವುದು, ಎಂಆರ್ಪಿಎಲ್, ಬಿಎಎಸ್ಎಫ್ ಕಂಪೆನಿಗಳು ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೇ ನೇರವಾಗಿ ಸಮುದ್ರಕ್ಕೆ ಹರಿಸುತ್ತಿರುವುದು, ಮನಪಾ ಚರಂಡಿ ನೀರು ಸಮುದ್ರ ಸೇರುತ್ತಿರುವುದು, ಹೊಯಿಗೆಬಜಾರ್ಗೆ ಸೂಕ್ತ ಸಂಪರ್ಕ ರಸ್ತೆ ಇಲ್ಲದಿರುವುದು, ಮಂಜೇಶ್ವರದಿಂದ ಕಾಪುವರೆಗೆ ಸಮುದ್ರದಲ್ಲಿ ಮೀನು, ಚಿಪ್ಪುಮೀನು ಕೊರತೆ, ನದಿಯಲ್ಲಿ ಮರಳುಗಾರಿಕೆ ಸಮಸ್ಯೆ, ಕೃಷಿಗೆ ರಾಸಾಯನಿಕ ಬಳಕೆ, ಸಿಆರ್ಜೆಡ್ ಸಮಸ್ಯೆ, ಮೀನುಗಾರಿಕೆಯಲ್ಲಿ ಮಧ್ಯವತಿಗಳ ಸಮಸ್ಯೆ, ಐಸ್ಪ್ಲ್ಯಾಂಟ್ ಮತ್ತು ಕೋಲ್ಡ್ ಸ್ಟೋರೇಜ್ಗಳ ಸಮಸ್ಯೆ, ಮಂಗಳೂರಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲದಿರುವುದು, ಮೀನುಗಾರಿಕಾ ಇಲಾಖೆ ಸವಲತ್ತುಗಳು ಅರ್ಹ ಮೀನುಗಾರರಿಗೆ ಲಭ್ಯವಾಗದೇ ಇರುವುದು ಮುಂತಾದ ಸಮಸ್ಯೆ, ತೊಂದರೆಗಳ ಬಗ್ಗೆ ಮೀನುಗಾರ ಮುಖಂಡರು ಸಭೆಯಲ್ಲಿ ಸುದೀರ್ಘ ಅಹವಾಲು ಸಲ್ಲಿಸಿದರು.