Wednesday, July 6, 2022

Latest Posts

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅವರಿ‌ಗೆ ರಾಜ್ಯ ಸಚಿವ ಸ್ಥಾನಮಾನ

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ಕಲ್ಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ .
ಖ್ಯಾತ ನ್ಯಾಯವಾದಿಯಾಗಿರುವ ಮಟ್ಟಾರು ರತ್ನಾಕರ ಹೆಗ್ಡೆಯವರು ಕಳೆದ ಫೆ.೨೭ಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರು ಉಡುಪಿ ಜಿಲ್ಲಾ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ಉಡುಪಿ ಜಿಲ್ಲೆಯ ಶಿರ್ವ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್ ಸಂಚಾಲರಕರಾಗಿ ಅನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾನೂನು ವಿವಿ ಸಿಂಡಿಕೇಟ್ ಸದಸ್ಯರಾಗಿ , ಉಡುಪಿ ಎಪಿಎಂಸಿ ಅಧ್ಯಕ್ಷರಾಗಿ, ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ ನಿರ್ದೇಶಕರಾಗಿ , ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಹೆಚ್ಚಿನ ಅಭಿವೃದ್ಧಿ ನಿಧಿಗೆ ಅವಕಾಶ
ಈ ಸಂದರ್ಭ ‘ಹೊಸದಿಗಂತ ’ಜೊತೆ ಮಾತನಾಡಿದ ಮಟ್ಟಾರ್ ರತ್ನಾಕರ ಹೆಗ್ಡೆ ಅವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಕೇವಲ ಕರಾವಳಿ ಎಂದಲ್ಲ, ಮೂರು ಜಿಲ್ಲೆಗಳ ಸಮಗ್ರ ಭೌಗೋಳಿಕ ಪ್ರದೇಶವನ್ನು ಒಳಗೊಳ್ಳುವ ಅವಕಾಶ ಹೊಂದಿದೆ. ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ನಿಧಿ -ಅನುದಾನಗಳು ಲಭಿಸಲು ಅವಕಾಶವಿದ್ದು,ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡಲು ಸಾಧ್ಯವಿದೆ.ಈಗಾಗಲೇ ೨೦ಕೋ.ರೂ.ಗಳ ವಿವಿಧ ಯೋಜನೆಗಳು ನಿರ್ಮಾಣ ಹಂತದಲ್ಲಿದ್ದು, ಇವುಗಳಲ್ಲಿ ರಸ್ತೆ, ಸಂಪರ್ಕ ರಸ್ತೆ, ಸಣ್ಣ ಸೇತುವೆ ಇತ್ಯಾದಿಗಳು ಸೇರಿವೆ. ಮೂರೂ ಜಿಲ್ಲೆಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ಕೋರಿ ಬೇಡಿಕೆಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಇವುಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಪ್ರಾಧಿಕಾರದಡಿ ರಸ್ತೆ, ಲಿಂಕ್ ರೋಡ್, ಸೇತುವೆಯಲ್ಲದೆ ಪ್ರವಾಸೋದ್ಯಮ, ಮೀನುಗಾರಿಕೆ, ಟೆಂಪಲ್ ಟೂರಿಸಂನಂತಹ ಕ್ಷೇತ್ರಗಳನ್ನು ಕೂಡಾ ಒಳಪಡಿಸಲು ಅವಕಾಶವಿದೆ.ಮುಂದಿನ ದಿನಗಳಲ್ಲಿ ಸಂಸದರು ಮತ್ತು ಶಾಸಕರ ಸಭೆ ಕರೆದು ಯೋಜನೆಗಳ ಪ್ರಸ್ತಾವನೆ ಮತ್ತು ಆರ್ಥಿಕ ಮಂಜೂರಾತಿಗೆ ಸಂಬಂಸಿ ಚರ್ಚಿಸಲಾಗುವುದು.ಈಗ ಕಾರ್ಯಗತಗೊಳ್ಳುತ್ತಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದರು. ಅಲ್ಲದೆ ಉಡುಪಿಯಲ್ಲೂ ಪ್ರಾಧಿಕಾರದ ಕಚೇರಿ ತೆರೆಯಲು ಮುಖ್ಯಮಂತ್ರಿಯವರು ಸೂಚಿಸಿದ್ದು ಇದರಂತೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳಲಿದ್ದು, ಇದರಿಂದ ಅಭಿವೃದ್ಧಿಗೆ ವೇಗ ನೀಡಲು ಸಾಧ್ಯವಾಗಲಿದೆ ಎಂದು ಮಟ್ಟಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss