Sunday, April 18, 2021

Latest Posts

ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಮರಳು ನೀತಿ

ಬೆಂಗಳೂರು: ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಮರಳು ನೀತಿ ರೂಪಿಸಬೇಕೆಂದು ಬಿಜೆಪಿಯ ವೇದವ್ಯಾಸ ಕಾಮತ್ ಮತ್ತು ರಘುಪತಿ ಭಟ್ ಆಗ್ರಹಿಸಿದರು.

ಸಾರ್ವಜನಿಕ ಮಹತ್ತ್ವದ ಜರೂರು ವಿಷಯಗಳ ಬಗ್ಗೆ ಅಲ್ಪಕಾಲಾವಧಿ ಚರ್ಚೆ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಗೂಳಿಹಟ್ಟಿ ಶೇಖರ್, ಕೆರೆ-ಕುಂಟೆಗಳಲ್ಲಿ ಮರಳು ಮಿಶ್ರಿತ ಮಣ್ಣನ್ನು ಉಪಯೋಗಿಸಲು, ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಬೇಕು ಹಾಗೂ ಕೂಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಯಬೇಕೆಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಸಿ.ಸಿ. ಪಾಟೀಲ್, ಕೈಗೆಟುಕುವ ದರದಲ್ಲಿ ನಿಯಮಿತವಾಗಿ ಮರಳು ಸಿಗುವಂತೆ ಮಾಡಲು ನೂತನ ಮರಳು ನೀತಿ ಜಾರಿಗೆ ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಣ್ಣ ಹಳ್ಳ, ತೊರೆ, ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿನ ಸ್ವಂತ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ ಹಾಗೂ ಇತರೆ ಸಮುದಾಯ ಸಹಭಾಗಿತ್ವದ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲು, ಟ್ರ್ಯಾಕ್ಟರ್, ಎತ್ತಿನಗಾಡಿ ಇನ್ನಿತರ ಲಘು ವಾಹನಗಳಲ್ಲಿ ಮಾತ್ರ ಸಾಗಿಸಲು
ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ರಘುಪತಿ ಭಟ್, ಕರಾವಳಿ ನಿಯಂತ್ರಣ ವಲಯವಲ್ಲದ ಪ್ರದೇಶದಲ್ಲಿ (ನಾನ್-ಸಿ.ಆರ್‌.ಐಡ್) ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಅವಕಾಶ ಸಿಗಬೇಕು. ಹೀಗಾಗಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಚಿವ ಪಾಟೀಲ್ ಉತ್ತರಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss