Monday, June 27, 2022

Latest Posts

ಕರಿಕೆ ದುರಂತಕ್ಕೆ ಡಾ.ವೀರೇಂದ್ರ ಹೆಗ್ಗಡೆ ವಿಷಾದ: ರಸ್ತೆ ನಿಯಮ ಪಾಲನೆ ಅಗತ್ಯ ಬಗ್ಗೆ ಕಳಕಳಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪುತ್ತೂರಿನ ಈಶ್ವರಮಂಗಲದಿಂದ ಭಾನುವಾರ ಮದುವೆ ಕಾರ್ಯಕ್ರಮಕ್ಕೆ ಹೊರಟ ಬಸ್ಕೇರಳದ ಪೆರಿಯಾರಂ ಘಾಟ್ ರಸ್ತೆಯಲ್ಲಿ ಅಪಘಾತಕ್ಕೆ ಸಿಲುಕಿ ಹಲವರು ದುರ್ಮರಣ ಹೊಂದಿದ ಘಟನೆ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇಂತಹ ದುರಂತಗಳನ್ನು ತಪ್ಪಿಸಲು ರಸ್ತೆ ನಿಯಮ ಪಾಲನೆಯ ಅಗತ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಅವರು, ಈ ನಿಟ್ಟಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆಗುವ ಅನಾಹುತ ಅದೆಷ್ಟು ಘೋರವಾಗಿರುತ್ತದೆ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ. ಈ ಬಗ್ಗೆ ಅವರು ಅಮೂಲ್ಯ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಈ ದುರಂತ ತೀವ್ರ ವಿಷಾದನೀಯ. ದುರಂತದಲ್ಲಿ ಮರಣ ಹೊಂದಿದವರ ಕುಟುಂಬಗಳ ದುಃಖ ಒಂದೆಡೆಯಾದರೆ, ಬದುಕಿ ಉಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿರುವವರ ಯಾತನೆ ಇನ್ನೊಂದೆಡೆ. ಆದರೆ ಈ ದುರಂತಕ್ಕೆ ಕಾರಣವಾದ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚಬೇಕಾಗಿದೆ .ಬಸ್‌ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರಿದ್ದುದೇ ಈ ಅಪಘಾತಕ್ಕೆ ಕಾರಣವಾಗಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ ಎಂದು ಕಂಡು ಬಂದರೂ ಬಸ್ ಕಾಂಟ್ರಾಕ್ಟ್ ವಹಿಸಿಕೊಂಡವರು ಮಿತಿಮೀರಿದ ಜನರನ್ನು ಬಸ್‌ನಲ್ಲಿ ತುಂಬಿಸಿರುವುದೂ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.ಹೀಗಿರುವಾಗ ಬಸ್ ಮಾಲಕರು, ಚಾಲಕರು ಹಾಗೂ ಮದುವೆಯ ಬಸ್ ವಹಿಸಿಕೊಂಡವರು ಮೂವರೂ ಅಪಘಾತಕ್ಕೆ ಜವಾಬ್ದಾರರಾಗುತ್ತಾರೆ.
ಈ ಹಿನ್ನೆಲೆಯಲ್ಲಿ ಡಾ.ಹೆಗ್ಗಡೆಯವರು ಜರ್ಮನಿಗೆ ಹೋಗಿದ್ದಾಗಿನ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ನಾವು ಜರ್ಮನಿಗೆ ಹೋದಾಗ 9 ಜನರ ಪ್ರವಾಸಕ್ಕಾಗಿ ವಾಹನ ನಿಗದಿ ಪಡಿಸಿದ್ದೆವು. ಅಲ್ಲಿ ಇದ್ದ ಪರಿಚಿತರೊಬ್ಬರನ್ನು ಕುಳ್ಳಿರಿಸಿಕೊಳ್ಳಲು ಮುಂದಾದಾಗ 3 ಸೀಟುಗಳು ಖಾಲಿ ಇದ್ದರೂ ಚಾಲಕ ಈ ಬಗ್ಗೆ ಆಕ್ಷೇಪಿಸಿದ ಹಾಗೂ ನಿರ್ದಾಕ್ಷಿಣ್ಯವಾಗಿ ವರ್ತಿಸಿದ. ಆ ಕ್ಷಣದಲ್ಲಿ ಅಲ್ಲಿಯ ಚಾಲಕ ನಮಗೆ ನಿಷ್ಕರುಣಿಯಾಗಿ ಅನಿಸಿದರೂ ಅವರ ಶಿಸ್ತನ್ನು ಮೆಚ್ಚಲೇಬೇಕಾಗಿದೆ.
ಇದೇ ರೀತಿ ,ಲಂಡನ್‌ನಲ್ಲಿ ನನಗೊಂದು ಸನ್ಮಾನ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ನಿಗದಿಯಾದ ಸಂಖ್ಯೆಗಿಂತ ಹೆಚ್ಚಿಗೆ ಒಬ್ಬರನ್ನೂ ಹಾಲ್‌ನ ಒಳಗೆ ಬಿಡಲಿಲ್ಲ. ನಮ್ಮ ಜೊತೆ ಬಂದವರೆ ಹೊರಗೆ ಉಳಿಯ ಬೇಕಾಯಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಈ ಅಪಘಾತದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಡಾ.ಹೆಗ್ಗಡೆಯವರು, ಆಸ್ಪತ್ರೆಯಲ್ಲಿ ನೋವಿನಿಂದ
ಬಳಲುತ್ತಿರುವವರಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರಿದ್ದು, ನಮ್ಮ ದೇಶದಲ್ಲಿ
ಎಲ್ಲರೂ ಶಿಸ್ತು ಮತ್ತು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅಗತ್ಯವನ್ನು ಇಂತಹ ದುರಂತಗಳು ಮತ್ತೆ ಮತ್ತೆ ಎತ್ತಿತೋರುತ್ತಿವೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss